ಗಂಗಾವತಿ(ಕೊಪ್ಪಳ): ಹುಲಿ ಬೀದಿಗಿಳಿದು ಬೇಟೆಯಾಡಲಿ. ಆ ಹುಲಿಗೆ ಹೈಕಮಾಂಡ್ ಮೂಲಕ ಬಲೆ ಹಾಕ್ತಿವೋ ಅಥವಾ ಬೋನು ಇಡ್ತಿವೋ ಎಂಬುವುದನ್ನು ಕಾದು ನೋಡಿ ಎಂದು ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಜಿ. ಜನಾರ್ದನ ರೆಡ್ಡಿ ಹೇಳಿಕೆಗೆ ಟಾಂಗ್ ನೀಡಿದ್ದಾರೆ. 'ಹುಲಿ ಕಾಡಲಿದ್ದರೂ, ಜೈಲಲ್ಲಿದ್ದರೂ ಹುಲಿನೆ. ಹಾಗೆ ಈ ಜನಾರ್ದನ ರೆಡ್ಡಿ ಎಲ್ಲಿದ್ದರೂ ರೆಡ್ಡಿನೆ. ಹುಲಿ ಈಗ ಬೇಟೆಗೆ ಇಳಿದಿದೆ. ಜಿಂಕೆಗಳು ಮನೆಗೆ ಸೇರಿಕೊಳ್ಳಬೇಕು' ಎಂದು ಜನಾರ್ದನ ರೆಡ್ಡಿ ಇತ್ತೀಚೆಗೆ ಕನಕಗಿರಿಯಲ್ಲಿ ನಡೆದಿದ್ದ ಪಕ್ಷದ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರನ್ನು ಟಾರ್ಗೆಟ್ ಮಾಡಿ ಮಾತನಾಡಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕ ಪರಣ್ಣ ಮುನವಳ್ಳಿ, ನಮಗೆ ಹೈಕಮಾಂಡ್ ನಿರ್ಧಾರವೇ ಅಂತಿಮ. ಹುಲಿ ತನ್ನ ಪಾಡಿಗೆ ತಾನು ಬೇಟೆಯಾಡಲಿ. ಈ ಬಗ್ಗೆ ನಾನು ಹೆಚ್ಚಿಗೆ ಪ್ರತಿಕ್ರಿಯೆ ನೀಡಲಾರೆ. ಆದರೆ ಹುಲಿ ಬೇಟೆಗೆ ನಮ್ಮ ಹೈಕಮಾಂಡ್ ಬಲೆ ಹಾಕುತ್ತದೆಯೋ ಅಥವಾ ಬೋನು ಇಟ್ಟು ಬಂಧನ ಮಾಡುತ್ತದೆಯೋ ಎಂಬುವುದನ್ನು ಕಾದು ನೋಡಿ ಎಂದರು. ಸಿಬಿಐ ಮೂಲಕ ಈಗಾಗಲೇ ರೆಡ್ಡಿಯ ಬಲೆಗೆ ಯತ್ನಿಸಲಾಗಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ, ಅದಕ್ಕೆಲ್ಲ ಹೈಕಮಾಂಡ್ ಉತ್ತರ ನೀಡುತ್ತದೆ ಎಂದು ಹೇಳಿದರು.
ಮಾ.14ಕ್ಕೆ ಗಂಗಾವತಿಗೆ ಸಿಎಂ: ಮಾ.14ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಗರಕ್ಕೆ ಆಗಮಿಸಲಿದ್ದಾರೆ. ನಗರದ ತಾಲೂಕು ಕ್ರಿಡಾಂಗಣದಲ್ಲಿ ಹಮ್ಮಿಕೊಂಡಿರುವ ಫಲಾನುಭವಿಗಳ ಬೃಹತ್ ಸಮಾವೇಶದಲ್ಲಿ ಸಿಎಂ ಭಾಗಿಯಾಗಲಿದ್ದಾರೆ. ಸರ್ಕಾರದ ನಾನಾ ಯೋಜನೆಗಳ ಫಲಾನುಭವಿಗಳನ್ನು ಈ ವೇದಿಕೆಯಲ್ಲಿ ಸೇರಿಸಲಾಗುತ್ತಿದೆ. ಇದು ಸರ್ಕಾರಿ ಕಾರ್ಯಕ್ರಮ. ಹೀಗಾಗಿ 30 ರಿಂದ 40 ಸಾವಿರ ಜನ ಫಲಾನುಭವಿಗಳು ಭಾಗಿಯಾಗಲಿದ್ದಾರೆ. ಕೇಂದ್ರ ಮತ್ತು ರಾಜ್ಯದ ನಾಯಕರೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಶಾಸಕ ತಿಳಿಸಿದರು.
120 ಕೋಟಿ ರೂ ಕಾಮಗಾರಿಗೆ ಚಾಲನೆ: ತಾಲೂಕಿನ ಪ್ರಮುಖ ಧಾರ್ಮಿಕ ತಾಣವಾಗಿರುವ ಅಂಜನಾದ್ರಿ ಅಭಿವೃದ್ಧಿ ವಿಚಾರದಲ್ಲಿ ರಾಜ್ಯ ಸರ್ಕಾರ ಬದ್ಧವಾಗಿದೆ. ಈಗಾಗಲೆ 120 ಕೋಟಿ ಮೊತ್ತದ ಅನುದಾನ ನೀಡಿದೆ. ಈ ಅನುದಾನದಲ್ಲಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳಗೆ ಚಾಲನೆ ನೀಡಲು ಮಾ.14ರಂದು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಂಜನಾದ್ರಿಗೆ ಆಗಮಿಸಲಿದ್ದಾರೆ. ಬೆಳಗ್ಗೆ ಬೆಂಗಳೂರಿನಿಂದ ಹೊರಡುವ ಸಿಎಂ ನೇರವಾಗಿ ಆನೆಗೊಂದಿಯ ಹೆಲಿಪ್ಯಾಡ್ನಲ್ಲಿ ಇಳಿದು ಅಂಜನಾದ್ರಿ ಬೆಟ್ಟದಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಬಳಿಕ ರಸ್ತೆ ಮೂಲಕ ಗಂಗಾವತಿಗೆ ಆಗಮಿಸಿ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಶಿಗ್ಗಾವಿಗೆ ಹೆಲಿಕಾಪ್ಟರ್ ಮೂಲಕ ತೆರಳಿದ್ದಾರೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ಅಂತಿಮ ಹಂತದಲ್ಲಿ ಭೂ ಸ್ವಾಧೀನ : ಅಂಜನಾದ್ರಿ ಬೆಟ್ಟದಲ್ಲಿ ಕೈಗೊಳ್ಳಲು ಉದ್ದೇಶಿಸಿರುವ 120 ಕೋಟಿ ರೂ.ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯವಾಗುವ ಭೂ ಸ್ವಾಧೀನ ಕಾರ್ಯ ಅಂತಿಮ ಹಂತದಲ್ಲಿದೆ. ಈಗಾಗಲೆ ಶೇ.70ರಷ್ಟು ಭೂಮಿ ಪಡೆದುಕೊಳ್ಳಲಾಗಿದೆ. ಇನ್ನುಳಿದ ಭೂಮಿ ಪಡೆಯಲು ರೈತರ ಮನವೊಲಿಸಲಾಗಿದೆ. ಈಗಾಗಲೇ ಮೂರನೇ ನೋಟಿಸ್ ನೀಡಲಾಗಿದೆ. ಆನೆಗೊಂದಿ ಪರಿಸರ ಸೂಕ್ಷ್ಮತೆ, ಪ್ರಾಚೀನತೆಗೆ ಧಕ್ಕೆಯಾಗದ ರೀತಿಯಲ್ಲಿ ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದು ಶಾಸಕ ಇದೇ ಸಂದರ್ಭದಲ್ಲಿ ಹೇಳಿದರು.
ವಿಜಯ ಸಂಕಲ್ಪ ರಥಯಾತ್ರೆ: ರಾಜ್ಯ ಸರ್ಕಾರದ ಸಾಧನೆ, ಕೇಂದ್ರ ಸರ್ಕಾರದ ಮಹೋನ್ನತ ವಿಜಯಗಳನ್ನು ಬಿಂಬಿಸುವ ಉದ್ದೇಶಕ್ಕೆ ರಾಜ್ಯದಲ್ಲಿ ಆರಂಭಿಸಲಾದ ವಿಜಯ ಸಂಕಲ್ಪ ರಥಯಾತ್ರೆ ಮಾ.11ರಿಂದ 13ರವರಗೆ ಕೊಪ್ಪಳ ಜಿಲ್ಲೆಯಲ್ಲಿ ಸಂಚರಿಸಲಿದೆ. ಕೊಪ್ಪಳ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರದದಲ್ಲಿ ವಿಜಯ ಸಂಕಲ್ಪ ರಥಯಾತ್ರೆ ಸಂಚರಿಸಲಿದ್ದು, ಮಾ.12ಕ್ಕೆ ಕೊಪ್ಪಳ ಜಿಲ್ಲೆಗೆ ಪ್ರವೇಶಿಸಲಿದೆ. 13ರಂದು ಗಂಗಾವತಿಗೆ ಆಗಮಿಸಲಿದ್ದು, ಗಾಂಧಿ ವೃತ್ತದಲ್ಲಿ ಬಹಿರಂಗ ಸಭೆ ಆಯೋಜಿಸಲಾಗಿದೆ. ಬಳಿಕ ಕಾರಟಗಿಗೆ ರಥಯಾತ್ರೆ ತೆರಳಿದೆ ಎಂದು ಅವರು ವಿವರಿಸಿದರು.
ಇದನ್ನೂ ಓದಿ: ನಾನು ಕಿಂಗೋ, ಕಿಂಗ್ ಮೇಕರೋ ಸ್ವಲ್ಪ ಕಾದು ನೋಡಿ : ಜನಾರ್ದನ ರೆಡ್ಡಿ