ಗಂಗಾವತಿ: ಚುನಾವಣೆಯಲ್ಲಿ ಸೋತು ಸುಣ್ಣವಾದ ಬಳಿಕವೂ ಮಾಜಿ ಸಚಿವ ಇಕ್ಬಾಲ್ ಅನ್ಸಾರಿಗೆ ಬುದ್ಧಿ ಬಂದಂತೆ ಕಾಣುತ್ತಿಲ್ಲ. ಬಹುಶಃ ಅದು ಅವರಿಗೆ ಬುದ್ಧಿ ಭ್ರಮಣೆಯಾಗಿರುವ ಸಂಕೇತವಾಗಿರಬಹುದು ಎಂದು ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ವಾಗ್ದಾಳಿ ನಡೆಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಉನ್ನತ ಪದವಿಯಲ್ಲಿರುವವರ ಬಗ್ಗೆ ಹಗುರವಾಗಿ ಮಾತನಾಡಿದರೆ, ಅದು ಅವರ ವ್ಯಕ್ತಿತ್ವ ತೋರಿಸುತ್ತದೆ. ಜನನ ಆಕಸ್ಮಿಕ, ಆದರೆ ಸಾವು ಮಾತ್ರ ಖಚಿತ ಎಂಬ ಸಣ್ಣ ಪ್ರಜ್ಞೆ ಅನ್ಸಾರಿ ಅವರಿಗಿಲ್ಲದಂತೆ ಕಾಣುತ್ತದೆ.
ಅನಾರೋಗ್ಯದಿಂದ ಸಾವನ್ನಪ್ಪಿದ ಬಿಜೆಪಿ ಪಕ್ಷದ ಮುಖಂಡರ ಬಗ್ಗೆ ಅನ್ಸಾರಿ ಲಘುವಾಗಿ ಮಾತನಾಡಬಾರದು. ಅವರುಗಳ ಸಾವಿಗೆ ಅದಕ್ಕೆ ಮೋದಿ ಕಾಲ್ಗುಣ ಹೇಗೆ ಕಾರಣವಾಗುತ್ತದೆ? ಚುನಾವಣೆ ಮುಗಿದು ಎರಡು ವರ್ಷದ ಬಳಿಕ ಈಗ ಮಾತನಾಡುವುದರ ಔಚಿತ್ಯ ಏನು ಎಂದು ಪ್ರಶ್ನಿಸಿದರು.