ಕೊಪ್ಪಳ: ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಮನೆಗಳಿಗೆ ನೀರು ನುಗ್ಗಿದ ಹಿನ್ನೆಲೆಯಲ್ಲಿ ಕೊಪ್ಪಳದ ಕುವೆಂಪು ನಗರಕ್ಕೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಹಾಗೂ ತಹಸೀಲ್ದಾರ್ ಜೆ.ಬಿ. ಮಜ್ಜಗಿ ಹಾಗೂ ನಗರಸಭೆ ಅಧಿಕಾರಿಗಳು ಭೇಟಿ ನೀಡಿದರು.
ಗವಿಮಠದ ಹಿಂಭಾಗದಲ್ಲಿರುವ ಕುವೆಂಪು ನಗರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನೀರು ನುಗ್ಗಿದ ಪರಿಣಾಮ ದವಸ ಧಾನ್ಯಗಳು ಹಾಗೂ ಪುಸ್ತಕಗಳು ಸೇರಿದಂತೆ ವಸ್ತುಗಳು ಹಾನಿಗೊಳಗಾಗಿವೆ ಎಂದು ಶಾಸಕರ ಎದುರು ಜನರು ಅಳಲು ತೋಡಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ನಗರದ ಎರಡು ವಾರ್ಡ್ ಗಳಲ್ಲಿ ಮಳೆಯಿಂದು ಸುಮಾರು 17 ಕುಟುಂಬಗಳಿಗೆ ತೊಂದರೆಯಾಗಿದೆ. ಮನೆಯಲ್ಲಿದ್ದ ಆಹಾರ ಸಾಮಾಗ್ರಿ ಹಾಗೂ ಇತರೆ ವಸ್ತುಗಳು ಹಾನಿಗೊಳಗಾಗಿವೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುವಂತೆ ಈಗಾಗಲೇ ತಹಸೀಲ್ದಾರರಿಗೆ ಸೂಚಿಸಲಾಗಿದೆ. ಶೀಘ್ರವೇ ಅವರಿಗೆ ನಿಯಮಾನುಸಾರವಾಗಿ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.