ಗಂಗಾವತಿ(ಕೊಪ್ಪಳ): ಮೀಸಲಾತಿ ಇತ್ತೀಚಿಗೆ ಬಂದಿದೆ. ಆದರೆ ಮೀಸಲಾತಿ ಇಲ್ಲದ ಸಂದರ್ಭದಲ್ಲಿ ಬಳ್ಳಾರಿ ಮತ್ತು ಸಿರುಗುಪ್ಪಾದಲ್ಲಿ ಎಸ್ಟಿ ಸಮುದಾಯದ ವ್ಯಕ್ತಿಗಳನ್ನು ನಾನು ದೊಡ್ಡಮಟ್ಟಕ್ಕೆ ಬೆಳೆಸಿದ್ದೇನೆ ಎಂದು ಶಾಸಕ ಗಾಲಿ ಜನಾರ್ದರೆಡ್ಡಿ ಹೇಳಿದರು.
ವಾಲ್ಮೀಕಿ ಜಯಂತಿ ಅಂಗವಾಗಿ ನಗರದ ವಾಲ್ಮೀಕಿ ವೃತ್ತದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಪರಿಶಿಷ್ಟ ಪಂಗಡ ವಿಸ್ತರಣಾ ವಿಭಾಗ ಹಾಗೂ ನಾಯಕ ಸಮಾಜದಿಂದ ಶನಿವಾರ ಹಮ್ಮಿಕೊಂಡಿದ್ದ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದರು.
ಬಳ್ಳಾರಿಯ ಯಾವುದೋ ಒಂದು ಸ್ಲಂನಲ್ಲಿದ್ದ ಹುಡುಗ ಶ್ರೀರಾಮುಲು, ಅವರನ್ನು ಕರೆತಂದು ರಾಜಕೀಯವಾಗಿ ಶಾಸಕ, ಸಚಿವನಾಗಿ ಮಾಡಿದೆ. ಡಿಸಿಎಂ ಹಂತದವರೆಗೂ ಬೆಳೆಸಿದ್ದೇನೆ. ಅಲ್ಲದೇ ಸಿರುಗುಪ್ಪದಲ್ಲಿ ಸೋಮಲಿಂಗಪ್ಪ ಅವರನ್ನು ಶಾಸಕನಾಗುವಂತೆ ಮಾಡಿದೆ. ಕೇವಲ ಈ ಇಬ್ಬರು ಮಾತ್ರವಲ್ಲ, ಇಡೀ ಬಳ್ಳಾರಿ ಜಿಲ್ಲೆಯ 13 ಜನರಲ್ಲಿ ಐದು ಜನ ಶಾಸಕರು, ಇಬ್ಬರು ಸಂಸದರು ಹೀಗೆ ಎಸ್ಟಿ ಸಮುದಾಯಕ್ಕೆ ಸೇರಿದವರನ್ನು ರಾಜಕಿಯವಾಗಿ ಮಾಡಿದ ತೃಪ್ತಿ ನನಗಿದೆ ಎಂದರು.
ವಾಲ್ಮೀಕಿ ಅಭಯಾರಣ್ಯ: ಈ ಭಾಗದ ಜನರ ಬಹು ದಿನಗಳ ಬೇಡಿಕೆಯಂತೆ ಮಲ್ಲಾಪುರ, ಚಿಕ್ಕಬೆಣಕಲ್, ಸಿದ್ದಿಕೇರಿ ಬೆಟ್ಟಗುಡ್ಡಗಳನ್ನು ಒಳಗೊಂಡ ಪರ್ವತ ಶ್ರೇಣಿಗೆ ವಾಲ್ಮೀಕಿ ಅಭಯಾರಣ್ಯ ಎಂದು ನಾಮಕರಣ ಮಾಡುವ ಬಗ್ಗೆ ಬೇಡಿಕೆ ವ್ಯಕ್ತವಾಗಿದೆ. ಈ ಬೇಡಿಕೆ ಸಮಂಜಸವಾಗಿದ್ದು, ಸರ್ಕಾರದೊಂದಿಗೆ ಚರ್ಚಿಸಿ ಕಾರ್ಯಗತಕ್ಕೆ ಯತ್ನಿಸಲಾಗುವುದು. ಅಲ್ಲದೇ ಕೇಂದ್ರ ಮತ್ತು ರಾಜ್ಯದಿಂದ ದೊಡ್ಡ ಪ್ರಮಾಣ ಅನುದಾನ ತಂದು ಅಂಜನಾದ್ರಿಯಲ್ಲಿ ಒಂದೇ ವೇದಿಕೆಯಲ್ಲಿ ಐದು ಸಾವಿರ ಜನ ಕೂರಬಹುದಾದ ದೊಡ್ಡ ಸಮುದಾಯ ಭವನ ನಿರ್ಮಾಣ ಮಾಡಲಾಗುವುದು. ಅದಕ್ಕೆ ವಾಲ್ಮೀಕಿ ಭವನ ಎಂದು ನಾಮಕರಣ ಮಾಡಲಾಗುವುದು.
ಇಡೀ ಕರ್ನಾಟಕ ರಾಜ್ಯದಲ್ಲಿ ಒಂದೇ ವೇದಿಕೆಯಲ್ಲಿ ಐದು ಸಾವಿರ ಜನ ಕೂರುವ ಸಮುದಾಯ ಭವನ ಎಲ್ಲಿಯೂ ಇಲ್ಲ. ಮೊದಲ ಬಾರಿಗೆ ಅಂಜನಾದ್ರಿಯಲ್ಲಿ ಮಾಡಲಾಗುವುದು. ಅಯೋಧ್ಯೆಯಲ್ಲಿ ಮಹರ್ಷಿ ವಾಲ್ಮಿಕೀಯ ದೇವಸ್ಥಾನ ನಿರ್ಮಾಣ ಮಾಡುತ್ತಿದ್ದಾರೋ. ಅದೇ ಮಾದರಿಯಲ್ಲಿ ಅಂಜನಾದ್ರಿಯಲ್ಲಿ ದೇಗುಲ ನಿರ್ಮಿಸಲಾಗುವುದು ಎಂದರು.
ರಾಮಾಯಣದ ಮೂಲಕ ಜೀವನ ಮೌಲ್ಯ ಕಟ್ಟಿ ಕೊಡಲಾಗಿದೆ: ರಾಮಾಯಣ ಎಂಬ ಮಹಾಕಾವ್ಯ ಬರೆಯುವ ಮೂಲಕ ಇಡೀ ಮನುಕುಲಕ್ಕೆ ಮಹರ್ಷಿ ವಾಲ್ಮಿಕಿ ಜೀವನದ ಮೌಲ್ಯವನ್ನು ಕಟ್ಟಿಕೊಟ್ಟಿದ್ದಾರೆ. ಅವರ ಕೊಡುಗೆ ಮನುಕುಲ ಇರುವರೆಗೂ ಇರಲಿದೆ. ವಾಲ್ಮಿಕಿಯು ರಾಮಾಯಣ ಬರೆಯದೇ ಹೋಗಿದ್ದರೆ ಬಹುಶಃ ಈ ಜಗತ್ತಿಗೆ ರಾಮ, ಲಕ್ಷ್ಮಣ, ಲಂಕೆ, ಕಿಷ್ಕಿಂಧೆ, ಅಯೋಧ್ಯೆಯಂತ ಪೌರಾಣಿಕ ಪಾತ್ರಗಳನ್ನು ಯಾರಿಂದಲೂ ಸೃಷ್ಟಿಸಲು ಸಾಧ್ಯವಾಗದೇ ಹೋಗಿರುತಿತ್ತು. ಅಲ್ಲದೇ ರಾಮಾಯಣ ಮೂಲಕ ಜೀವನದ ಮೌಲ್ಯಗಳನ್ನು ವಾಲ್ಮೀಕಿ ಕಟ್ಟಿ ಕೊಟ್ಟಿದ್ದಾರೆ ಎಂದರು.
ಇದನ್ನೂ ಓದಿ: ಎಐಸಿಸಿ ಅಧ್ಯಕ್ಷ ಸ್ಥಾನ ಸ್ವೀಕರಿಸಿ ವರ್ಷ ಪೂರೈಸಿದ್ದು, ಅದನ್ನು ದಕ್ಷತೆಯಿಂದ ನಿಭಾಯಿಸಿರುವೆ: ಮಲ್ಲಿಕಾರ್ಜುನ ಖರ್ಗೆ