ಕುಷ್ಟಗಿ(ಕೊಪ್ಪಳ): ತಾಲೂಕಿನ ನಿಡಶೇಸಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಕಳಪೆ ಆಹಾರ ಸೇವನೆಯಿಂದ ಅಸ್ವಸ್ಥರಾದ ಹಿನ್ನೆಲೆ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಶಾಲೆಗೆ ಭೇಟಿ ನೀಡಿ ವಾಸ್ತವಾಂಶ ಪರಿಶೀಲಿಸಿದರು.
ಸೋಮವಾರ ಬೆಳ್ಳಂ ಬೆಳಗ್ಗೆ ಶಾಲೆಗೆ ದಿಢೀರ್ ಭೇಟಿ ನೀಡಿದ ಶಾಸಕರು, ವಿದ್ಯಾರ್ಥಿಗಳ ಅಹವಾಲು ಆಲಿಸಿದರು. ನಿನ್ನೆಯ (ಭಾನುವಾರ) ಪ್ರಕರಣದಲ್ಲಿ ಅಹಾರ ಪದಾರ್ಥದಲ್ಲಿ ತುಕ್ಕು ಹಿಡಿದ ಪಿನ್, ನುಸಿ ಕಂಡು ಬಂದಿರುವ ವಿದ್ಯಾರ್ಥಿಗಳ ಆರೋಪಕ್ಕೆ ಶಾಸಕರು ಗರಂ ಆದರು. ಅಲ್ಲದೆ, ನೀವು ನಿಮ್ಮ ಮನೆಯ ಮಕ್ಕಳಿಗೆ ಈ ರೀತಿಯ ಅಹಾರ ತಯಾರಿಸುತ್ತಿರಾ..?. ಇಲ್ಲಿನ ವಿದ್ಯಾರ್ಥಿಗಳು ನಿಮ್ಮ ಮಕ್ಕಳಲ್ಲವೇ ಎಂದು ಅಡುಗೆ ತರಾರಿಸುವವರನ್ನು ತರಾಟೆಗೆ ತೆಗೆದುಕೊಂಡರು.
ಅಲ್ಲದೆ, ಪ್ರತಿನಿತ್ಯ ತಪ್ಪದೇ ಬೆಳಗ್ಗೆ 6 ಗಂಟೆಗೆ ಬರಬೇಕು. ಗುಣಮಟ್ಟದ ಹಾಗೂ ಶುಚಿ, ರುಚಿಯ ಅಹಾರ ತಯಾರಿಸಬೇಕು. ಇಂತಹ ಪ್ರಕರಣಗಳು ಮರುಕಳಿಸದಂತೆ ಅಡುಗೆಯವರಿಗೆ ತಾಕೀತು ಮಾಡಿದರು. ನಂತರ ವಿದ್ಯಾರ್ಥಿಗಳೊಂದಿಗೆ ಉಪಹಾರ ಸೇವಿಸಿದರು.
ನಂತರ ಮಕ್ಕಳ ದೈಹಿಕ ಸಾಮರ್ಥ್ಯಕ್ಕನುಸಾರವಾಗಿ ಅಹಾರ ನೀಡಬೇಕು, ವಿದ್ಯಾರ್ಥಿಗಳಿಗೆ ಹೊಟ್ಟೆ ತುಂಬ ಊಟ ನೀಡದಿದ್ದರೆ ಅವರು, ಸರಿಯಾಗಿ ಅಭ್ಯಾಸ ಮಾಡುವುದಿಲ್ಲ. ಅರೆ ಹೊಟ್ಟೆ ಊಟ ನೀಡದಿರಿ. ಸರ್ಕಾರ ಏನೂ ಕಡಿಮೆ ಮಾಡಿಲ್ಲ. ವಿದ್ಯಾರ್ಥಿಗಳಿಗೆ ಓದುವ ಪೂರಕ ವಾತವರಣ ನಿರ್ಮಿಸಿ ಎಂದು ಪ್ರಾಚಾರ್ಯ ವಿಜಯಕುಮಾರ ದೊಡ್ಡಮನಿ ಅವರಿಗೆ ಶಾಸಕ ಪಾಟೀಲ ಸೂಚಿಸಿದರು.
ನನಗೆ ಪತ್ರ ಬರೆಯಿರಿ : ಊಟದಲ್ಲಿ ಏನಾದರೂ ವ್ಯತ್ಯಾಸವಾದರೆ ನನಗೆ ಪತ್ರ ಬರೆಯಿರಿ. ಯಾವ ಕಾರಣಕ್ಕೂ ಆತಂಕ ಪಡದೇ ಉತ್ತಮ ಅಭ್ಯಾಸ ಮಾಡಿ ಎಂದು ಶಾಸಕರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ನಂತರ ಶಾಲಾ ಚಟುವಟಿಕೆ ಹಾಗೂ ಅವ್ಯವಸ್ಥೆಯ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಪ್ರತ್ಯೇಕವಾಗಿ ಆಪ್ತ ಸಮಾಲೋಚನೆ ನಡೆಸಿದರು.