ಗಂಗಾವತಿ (ಕೊಪ್ಪಳ): ಮಾಜಿ ಸಚಿವ ಶಿವರಾಜ ತಂಗಡಗಿ ಬಂಡವಾಳ ಏನೆಂದು ಕ್ಷೇತ್ರದ ಜನರಿಗೆ ಚೆನ್ನಾಗಿ ಗೊತ್ತಿದೆ. ಅವರ ಹೋರಾಟ ಹಾರಾಟದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಶಾಸಕ ಬಸವರಾಜ ದಢೆಸೂಗೂರು ತಿರುಗೇಟು ನೀಡಿದ್ದಾರೆ.
ಕನಕಗಿರಿ ಕ್ಷೇತ್ರದಲ್ಲಿ ಶಿವರಾಜ ತಂಗಡಗಿ ನೇತೃತ್ವದಲ್ಲಿ ಕೈಗೊಂಡ ಕಾಂಗ್ರೆಸ್ ರ್ಯಾಲಿ ಬಗ್ಗೆ ಕನಕಗಿರಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ನಡೆಸಿದ ಟ್ರ್ಯಾಕ್ಟರ್ ರ್ಯಾಲಿ ಪ್ರತಿಭಟನೆಗೆ ಪ್ರತಿಯೊಂದು ಟ್ರ್ಯಾಕ್ಟರ್ಗೆ 3 ಸಾವಿರ ರೂಪಾಯಿ ಬಾಡಿಗೆ ಕೊಟ್ಟು ಕರೆಸಿದ್ದಾರೆ.
ಈಗಾಗಲೇ ಕೃಷಿ ಚಟುವಟಿಕೆಗಳು ಸಂಪೂರ್ಣವಾಗಿ ಮುಗಿದಿದ್ದು, ಟ್ರ್ಯಾಕ್ಟರ್ ಎಂಜಿನ್ಗಳು ಮನೆ ಮುಂದೆ ಖಾಲಿ ನಿಂತಿವೆ. ಇಂತವರಿಗೆ ಶಿವರಾಜ್ ತಂಗಡಗಿ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಮೂರರಿಂದ ಐದು ಸಾವಿರ ಬಾಡಿಗೆ ಕೊಟ್ಟು ರ್ಯಾಲಿಗೆ ಕರೆದುಕೊಂಡು ಬಂದಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಹೋರಾಟದ ಗಿಮಿಕ್ ಎಂದು ಟೀಕಿಸಿದ್ದಾರೆ.
ಇನ್ನೂ ನಾನು ಹೆಬ್ಬಟ್ಟು, ಅನಕ್ಷರಸ್ಥರೆಂದು ತಂಗಡಗಿ ಹೇಳಿಕೊಂಡು ತಿರುಗಾಡುತ್ತಾರೆ. ಕನಕಗಿರಿ ಕ್ಷೇತ್ರದಲ್ಲಿ ಮಾಜಿ ಸಚಿವ ಶಿವರಾಜ್ ತಂಗಡಗಿ ತಮ್ಮ ಅಧಿಕಾರಾವಧಿಯಲ್ಲಿ ಕೋಟಿ ಕೋಟಿ ಲೂಟಿ ಮಾಡಿ ಮನೆಯಲ್ಲಿ ಕುಳಿತಿದ್ದಾರೆ.
ಸುಪ್ರೀಂಕೋರ್ಟ್ ಆದೇಶದ ಬಗ್ಗೆ ಗೌರವ ನೀಡದ ತಂಗಡಗಿ ಒಬ್ಬ ಜನ ಸೇವಕರೆ..? ವಾಹನದ ದಾಖಲೆ, ಡ್ರೈವರ್ ಲೈಸೆನ್ಸ್, ವಿಮೆ ಇರಬೇಕು ಎಂದು ನ್ಯಾಯಾಲಯ ಹೇಳಿದೆ. ಇದನ್ನು ಸಾರಿಗೆ ಅಧಿಕಾರಿಗಳು ಇಂದಿನ ರ್ಯಾಲಿಯಲ್ಲಿ ತಪಾಸಣೆ ಮಾಡಿದ್ದಾರೆ. ಈ ಬಗ್ಗೆ ಅರಿವಿರದ ತಂಗಡಗಿ ನನ್ನ ವಿರುದ್ಧ ಅಪಪ್ರಚಾರ ಮಾಡಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ನಿಂದ ಬೃಹತ್ ಟ್ರ್ಯಾಕ್ಟರ್ ಜಾಥಾ