ಕೊಪ್ಪಳ: ಕನಕಗಿರಿ ತಾಲೂಕಿನ ಮೈಲಾಪುರ ಕ್ರಾಸ್ ಬಳಿ ಕಾರು ಡಿಕ್ಕಿ ಹೊಡೆ ಪರಿಣಾಮ ವಯೋವೃದ್ಧೆ ಮರಿಯಮ್ಮ ನಾಯಕ(70) ಮೃತಪಟ್ಟಿರುವ ಘಟನೆ ಜರುಗಿದೆ. ಮೈಲಾಪೂರ ಕ್ರಾಸ್ ಬಳಿ ಬಸ್ ನಿಲ್ದಾಣದಿಂದ ಮರಿಯಮ್ಮ ರಸ್ತೆ ದಾಟುತಿದ್ದರು. ಅದೇ ಸಮಯಕ್ಕೆ ಶಾಸಕರ ಇದ್ದ ಕಾರು ರಸ್ತೆಯಲ್ಲಿ ಸಂಚಾರ ನಡೆಸುತ್ತಿತ್ತು ಎನ್ನಲಾಗಿದೆ. ನಾಯಿ ಅಡ್ಡ ಬಂದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ವಯೋವೃದ್ಧೆಗೆ ಡಿಕ್ಕಿ ಹೊಡೆದಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿತ್ತು. ಆದರೆ ಈ ಮಾಹಿತಿಯನ್ನ ಶಾಸಕರು ತಳ್ಳಿಹಾಕಿದ್ದಾರೆ. ಕಾರು ಡಿಕ್ಕಿ ಹೊಡೆದಿಲ್ಲ ಎಂದು ಬಸವರಾಜ ದಢೇಸುಗೂರು ಸ್ಪಷ್ಟಪಡಿಸಿದ್ದಾರೆ.
ಏಕಾಏಕಿ ಕಾರು ಗುದ್ದಿದ ರಭಸಕ್ಕೆ ಮರಿಯಮ್ಮ ಅಸ್ವಸ್ಥಳಾಗಿದ್ದಾರೆ, ಕೂಡಲೇ ಶಾಸಕ ದಢೇಸುಗೂರು ಮರಿಯಮ್ಮಳನ್ನು ತಮ್ಮದೇ ಕಾರಿನಲ್ಲಿ ಚಿಕಿತ್ಸೆಗಾಗಿ ಕಾರಟಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದರು. ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಮರಿಯಮ್ಮ ಅಲ್ಲಿಯೂ ಚಿಕಿತ್ಸೆಗೆ ಸ್ಪಂದಿಸದ ಕಾರಣ ಬಳ್ಳಾರಿ ವಿಮ್ಸ್ ಗೆ ಸಾಗಿಸಲಾಗುತ್ತಿತ್ತು. ಈ ನಡುವೆ ಮಾರ್ಗಮಧ್ಯೆ ಮರಿಯಮ್ಮ ನಾಯಕ ಮೃತಪಟ್ಟಿದ್ದರು.
ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲು: ಮೂಲತಃ ಚಳ್ಳೂರು ಗ್ರಾಮದ ನಿವಾಸಿಯಾಗಿರುವ ಮರಿಯಮ್ಮ ನಾಯಕ ಮೈಲಾಪೂರ ಗ್ರಾಮದ ಮಗಳ ಮನೆಯಲ್ಲೇ ವಾಸ ಮಾಡುತ್ತಿದ್ದರು. ವೃದ್ಧಾಪ್ಯ ವೇತನ ಪಡೆಯುವ ಸಲುವಾಗಿ ಚಳ್ಳೂರು ಗ್ರಾಮಕ್ಕೆ ತೆರಳಿದ್ದಳು. ಮೈಲಾಪೂರ ಗ್ರಾಮದ ಮಗಳ ಮನೆಗೆ ಆಗಮಿಸುವಾಗ ಘಟನೆ ನಡೆದಿದೆ. ಈ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಪ್ರಕರಣದ ಬಗ್ಗೆ ಶಾಸಕರು ಹೇಳುವುದಿಷ್ಟು: ‘‘ಮಂಗಳವಾರ ಮಧ್ಯಾಹ್ನ ಸುಮಾರು 3:30ಕ್ಕೆ ನಾವು ಕಾರಟಗಿ ನಗರದಿಂದ ಕನಕಗಿರಿ ನಗರಕ್ಕೆ ಹೋಗುತ್ತಿದ್ದೆವು. ಕನಕಗಿರಿ ಬಳಿಕ ಬರುವ ಮೈಲಾಪೂರ ಎಂಬ ರಸ್ತೆಯ ಪಕ್ಕದ ಎಡಗಡೆ ಕೆಲವು ಮಹಿಳೆಯರು ಕುಳಿತಿದ್ದರು. ನಮ್ಮ ಕಾರು ಸಹ ಅದೇ ಮಾರ್ಗವಾಗಿ ಹೋಗುತ್ತಿತ್ತು. ಈ ನಾಯಿಯೊಂದು ಅಡ್ಡ ಬಂದಿತು. ನಮ್ಮ ಕಾರು ನಾಯಿಗೆ ಡಿಕ್ಕಿ ಹೊಡೆಯುತ್ತಿದ್ದಂತೆ ನಾಯಿ ಆ ವೃದ್ಧೆಯ ಮೇಲೆ ಬಿದ್ದಿದೆ. ನಾನು ಕಾರು ಓಡುಸುತ್ತಿರಲಿಲ್ಲ. ನಮ್ಮ ಚಾಲಕರೇ ಕಾರು ಓಡುಸುತ್ತಿದ್ದರು. ನನ್ನ ಕಾರು ವೃದ್ಧೆಗೆ ಡಿಕ್ಕಿಯಾಗಿಲ್ಲ. ಈ ಬಗ್ಗೆ ಸ್ಥಳೀಯ ಹಿರಿಯರ ಜೊತೆ ಮಾತನಾಡಿ ಆದ ಘಟನೆಯನ್ನು ಸಹ ತಿಳಿಸಿದ್ದೇನೆ' ಎಂದು ಶಾಸಕರು ಸ್ಪಷ್ಟನೆ ನೀಡಿದ್ದಾರೆ.
’’ನಾಯಿ ವೃದ್ಧೆಯ ಮೇಲೆ ಬಿದ್ದ ಪರಿಣಾಮ ಆಕೆಯ ಕೆನ್ನೆಯ ಭಾಗಕ್ಕೆ ಸ್ವಲ್ಪ ಗಾಯವಾಗಿತ್ತು. ಸ್ವಲ್ಪ ದೂರಹೋದ ಬಳಿಕ ಮತ್ತೆ ಹಿಂದೆ ಬಂದು ನೋಡಿದೆವು. ಬಳಿಕ ಕಾರಿನಿಂದ ಇಳಿದು ಆ ವೃದ್ಧೆಯನ್ನು ನಮ್ಮ ಕಾರಿನಲ್ಲೇ ಕಾರಟಗಿ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಮಾನವೀಯತೆ ದೃಷ್ಟಿಯಿಂದ ನಾನು ಸಹಾಯ ಮಾಡಿದೆ. ಅದೇ ಇದೀಗ ತಪ್ಪಾಗಿದೆ. ಇನ್ಶೂರೆನ್ಸ್ ಸಿಗುವುದಿದ್ದರೆ ಮಾಡಿಕೊಳ್ಳಿ ಎಂದು ಸಹ ಹೇಳಿದ್ದೇನೆ. ಕುಟುಂಬಕ್ಕೂ ಸಹ ನನ್ನ ಕೈಲಾದಷ್ಟು ಸಹಾಯ ಮಾಡುವೆ. ಅದು ಪರಿಹಾರವಲ್ಲ. ನನ್ನ ಕಡೆಯಿಂದ ವೈಯಕ್ತಿಕ ಸೇವೆ. ಇನ್ಶೂರೆನ್ಸ್ ಸಲುವಾಗಿ ನನ್ನ ಕಾರಿನ ಮೇಲೆ ದೂರು ನೀಡಲಾಗಿದೆ'. - ಬಸವರಾಜ ದಢೇಸೂಗೂರು, ಶಾಸಕ
ಇದನ್ನೂ ಓದಿ: ಅದ್ಧೂರಿ ಹುಟ್ಟುಹಬ್ಬ ಆಚರಣೆ.. ಗಂಗಾವತಿಯಲ್ಲಿ ಜನಾರ್ದನ ರೆಡ್ಡಿ ಶಕ್ತಿ ಪ್ರದರ್ಶನ