ಕೊಪ್ಪಳ: ಪಕ್ಷದ ಹೈಕಮಾಂಡ್ ಯಾರನ್ನು ನೇಮಕ ಮಾಡುತ್ತದೆಯೋ ಅವರು ಎಐಸಿಸಿ ಅಧ್ಯಕ್ಷರಾಗುತ್ತಾರೆ ಎಂದು ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಯಾರು ಅಧ್ಯಕ್ಷರಾಗುತ್ತಾರೆ ಎಂಬುದು ನಮಗೆ ಗೊತ್ತಿಲ್ಲ. ಈ ಬಗ್ಗೆ ಚರ್ಚೆ ನಡೆದಿರುವ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದೇನೆ. ಪಕ್ಷದ ಹೈಕಮಾಂಡ್ ಯಾರನ್ನು ನೇಮಕ ಮಾಡುತ್ತಾರೋ ಅವರು ಅಧ್ಯಕ್ಷರಾಗುತ್ತಾರೆ. ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ ಎಂದರು.
ಇನ್ನು ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಉತ್ಸವದ ಸಂದರ್ಭದಲ್ಲಿ ಜನರು ಉದ್ಧಟತನ ತೋರಿದ ಘಟನೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಕಳೆದ 15 ವರ್ಷಗಳಿಂದ ಇಂತಹ ಘಟನೆ ನಡೆಯುತ್ತಲೇ ಬಂದಿದೆ. ಕೊರೊನಾ ಕಾರಣಕ್ಕೆ ಉತ್ಸವ ಆಚರಿಸದಂತೆ ಸೂಚನೆ ನೀಡಲಾಗಿತ್ತು. ಅಲ್ಲಿ ಸೆಕ್ಷನ್ 144 ಜಾರಿ ಮಾಡಬೇಕಿತ್ತು. ಆದರೆ ನಿಷೇಧಾಜ್ಞೆ ಜಾರಿ ಮಾಡದ ಹಿನ್ನೆಲೆ ಈ ಘಟನೆ ನಡೆದಿದೆ. ಜನರು ಮಾಡಿದ್ದು ತಪ್ಪು, ಅವರು ಮಾಡಿದ್ದನ್ನು ನಾನು ಸಮರ್ಥಿಸಿಕೊಳ್ಳುವುದಿಲ್ಲ. ಘಟನೆ ಸಂಬಂಧ ಜನರ ಮೇಲೆ ಕೇಸ್ ಹಾಕಬೇಡಿ ಎಂದು ನಾನು ಎಸ್ಪಿಯವರಿಗೆ ಹೇಳಿಲ್ಲ. ಮುಂದಿನ ದಿನಗಳಲ್ಲಿ ಇಂತಹ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಶಾಸಕ ಅಮರೇಗೌಡ ಪಾಟೀಲ್ ಭಯ್ಯಾಪುರ ಹೇಳಿದರು