ಕೊಪ್ಪಳ: ನಾನು ಇಲ್ಲಿ ಯಾವುದೇ ಬೀಗತನ ಮಾಡಲು ಬಂದಿಲ್ಲ. ನಾನು ಬಂದಿರುವುದು ಕರ್ತವ್ಯ ನಿರ್ವಹಿಸಲು ಎಂದು ಕಳೆದ ಬಾರಿ ಕೊಪ್ಪಳಕ್ಕೆ ಬಂದಾಗ ಜಿಲ್ಲಾಧಿಕಾರಿ ವಿರುದ್ಧ ಗರಂ ಆದ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಬಿ.ಸಿ. ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಅಕಾಲಿಕ ಮಳೆಗೆ ಹಾನಿಯಾದ ಬೆಳೆ ಪರಿಶೀಲನೆಗೆ ಅಂದು ಬಂದಿದ್ದೆ. ಜಿಲ್ಲಾಧಿಕಾರಿ ಅಲ್ಲಿಗೆ ಬರಬೇಕಿತ್ತು. ಆದರೆ ಯಾಕೆ ಬಂದಿಲ್ಲ ಎಂದು ನಾನು ಕೇಳಿದ್ದೇನೆ. ಅದಕ್ಕೆ ಅವರು ಅಂದು ಉತ್ತರ ಕೂಡ ನೀಡಿದ್ದಾರೆ. ಆ ವಿಷಯ ಮುಗಿದು ಹೋಗಿದೆ. ನಾನು ಸರ್ಕಾರದ ಸಂಬಳ ತೆಗೆದುಕೊಳ್ಳುತ್ತೇನೆ. ರೈತರ ಕೆಲಸ ಮಾಡಿದ ಹೆಮ್ಮೆ ನನಗಿದೆ ಎಂದರು.
ಕೊರೊನಾ ಸೋಂಕಿತನೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಮಹಿಳೆಗೆ ಕೊಪ್ಪಳದಲ್ಲಿ ಆಶ್ರಯ ನೀಡಿದ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಸಚಿವರು, ಆ ಮಹಿಳೆಯ ಕೊರೊನಾ ವರದಿ ನೆಗೆಟಿವ್ ಬಂದಿದೆ. ಅವರು ಯಾವಾಗ ಕೊಪ್ಪಳಕ್ಕೆ ಬಂದಿದ್ದಾರೆಂಬ ಮಾಹಿತಿ ನನಗಿಲ್ಲ. ಅಧಿಕಾರಿಗಳನ್ನು ಕೇಳಿ ತಿಳಿದುಕೊಳ್ಳುತ್ತೇನೆ ಎಂದರು.
ರಾಜ್ಯದಲ್ಲಿ ಕೋವಿಡ್-19 ಪಾಸಿಟಿವ್ ಕೇಸ್ ಹೆಚ್ಚಾಗುತ್ತಿರುವುದು ದುರಂತ. ದೆಹಲಿಗೆ ಹೋಗಿ ಬಂದವರು ಯಾರೂ ಹೇಳಿಕೊಳ್ಳುತ್ತಿಲ್ಲ. ಅದೇನು ಅಪರಾಧವಲ್ಲ. ಹೋಗಿದ್ದಾಯ್ತು, ಬಂದಿದ್ದಾಯ್ತು. ಪರೀಕ್ಷೆ ಮಾಡಿದಾಗ ನೆಗಟಿವ್ ಬಂದರೆ ಮುಗಿದು ಹೋಯ್ತು. ಮನೆಯಲ್ಲಿ ಬಚ್ಚಿಟ್ಟುಕೊಂಡ ಕಾರಣ ನಾಲ್ಕು ಮಂದಿಗೆ ಕೊರೊನಾ ಸೋಂಕು ಹರಡುತ್ತಿದೆ. ಅದೇ ರೀತಿ ಜುಬಿಲಂಟ್ ಕಾರ್ಖಾನೆ ನೌಕರನಲ್ಲಿ ಆಗಿದೆ. ಇದೊಂದು ವಿಷಮಕಾರಿ ಪರಿಸ್ಥಿತಿ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.