ಕೊಪ್ಪಳ: ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಪಕ್ಷದ ಹೈಕಮಾಂಡ್ ತೆಗೆದುಕೊಂಡಿರುವ ನಿರ್ಧಾರವನ್ನು ನಾವು ಒಪ್ಪುತ್ತೇವೆ ಹಾಗೂ ಸ್ವಾಗತಿಸುತ್ತೇವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಕೊಪ್ಪಳ ತಾಲೂಕಿನ ಸಣ್ಣ ಕೈಗಾರಿಕಾ ವಸಾಹತು ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಿಗೆ ಈಗ ಟಿಕೆಟ್ ಸಿಕ್ಕಿಲ್ಲವೋ ಮುಂದೆ ಬೇರೆ ಬೇರೆ ಹಂತದಲ್ಲಿ ಅವರಿಗೆ ಸ್ಥಾನಮಾನ ಹಾಗೂ ಗೌರವ ನೀಡಲಾಗುತ್ತದೆ ಎಂದು ಹೆಚ್.ವಿಶ್ವನಾಥ್ಗೆ ಟಿಕೆಟ್ ಕೈ ತಪ್ಪಿರುವ ಕುರಿತು ಪ್ರತಿಕ್ರಿಯಿಸಿದರು.
ಪಕ್ಷದ ಹೈಕಮಾಂಡ್ ನಿರ್ಧಾರದಂತೆ ನಡೆದುಕೊಳ್ಳಬೇಕು. ಅವರು ಮಾಡಿರುವ ತ್ಯಾಗಕ್ಕೆ ನಾವು ಗೌರವ ಕೊಡುತ್ತೇವೆ. ರಾಜ್ಯದ ಕೋರ್ ಕಮಿಟಿಯಲ್ಲಿ ವಿಶ್ವನಾಥ್ ಅವರ ಬಗ್ಗೆಯೂ ಚರ್ಚೆಯಾಗಿದೆ. ಕೋರ್ ಕಮಿಟಿಯಲ್ಲಿ ಏನು ಚರ್ಚೆ ಮಾಡಿದೆ ಎಂಬುದನ್ನು ನಾನು ಬಹಿರಂಗವಾಗಿ ಮಾತಾಡುವುದಿಲ್ಲ ಎಂದರು.
ಜಿಂದಾಲ್ ಕೈಗಾರಿಕೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಅಲ್ಲಿ ಕೆಲಸ ಮಾಡುವವರನ್ನು ಅಲ್ಲಿಯೇ ಉಳಿಸಿಕೊಂಡು ಹೊರಗೆ ಕಳಿಸಬಾರದು. ಸೋಂಕು ಹರಡಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಕೆಲವೊಂದು ಉತ್ಪಾದನಾ ಕೈಗಾರಿಕೆಗಳನ್ನು ಬಂದ್ ಮಾಡಲು ಆಗುವುದಿಲ್ಲ ಎಂದು ಹೇಳಿದರು.
ದೇಶದ ಹಿತದೃಷ್ಟಿಯಿಂದ ಪ್ರಧಾನಿ ಮೋದಿ ಅವರು ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ. ಚೀನಾದ ಕುತಂತ್ರ ಬುದ್ಧಿಯ ಬಗ್ಗೆ ಜನರಿಗೆ ಗೊತ್ತಿದೆ. ಚೀನಾ ವಸ್ತುಗಳನ್ನು ಬಳಸಬಾರದು ಎಂಬುದು ಜನರ ಮನಸ್ಸಿಗೆ ಬಂದಿದೆ. ಯಾವುದೇ ಕಾರಣಕ್ಕೂ ಚೀನಾ ವಸ್ತುಗಳನ್ನು ಬಳಕೆ ಮಾಡಬಾರದು ಎಂದು ಎಲ್ಲರೂ ಪ್ರತಿಜ್ಞೆ ಮಾಡಬೇಕು. ಕೈಗಾರಿಕೆಗಳ ಆರಂಭಕ್ಕೆ ಭೂಮಿ ಪಡೆದು ಕೈಗಾರಿಕೆ ಆರಂಭಿಸದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದರು.