ಕೊಪ್ಪಳ: ಲಾಠಿ ಚಾರ್ಜ್ ಮಾಡಿಸಬೇಕಾ ಎಂಬ ಸಿಎಂ ಕುಮಾರಸ್ವಾಮಿ ಹೇಳಿಕೆಯನ್ನ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಸಚಿವ ಕೃಷ್ಣ ಬೈರೇಗೌಡ ಸಮರ್ಥಿಸಿಕೊಂಡಿದ್ದಾರೆ.
ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಿನ್ನೆ ಪ್ರತಿಭಟನೆ ಮಾಡಿದವರಿಗೆ ಸಿಎಂ ಕುಮಾರಸ್ವಾಮಿ ಅವರು ಚರ್ಚೆ ನಡೆಸಲು ಸಮಯ ನೀಡಿದ್ದರು. ಆದರೆ ಅಲ್ಲಿನ ಕೆಲವರು ಉದ್ದೇಶಪೂರ್ವಕವಾಗಿ ಪ್ರತಿಭಟನೆ ಮಾಡಲು ಮುಂದಾಗಿದ್ದರು. ಅಲ್ಲದೇ ಕಾನೂನು ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಸಿಎಂ ಕುಮಾರಸ್ವಾಮಿ ಅವರು ಕಾನೂನು ಕ್ರಮ ಕೈಗೊಳ್ಳಿ ಎಂದು ಹೇಳಿದ್ದರು ಎಂದು ಸಚಿವ ಕೃಷ್ಣ ಬೈರೇಗೌಡ ಸಮರ್ಥಿಸಿಕೊಂಡರು.
ಮೋದಿಗೆ ವೋಟ್ ಹಾಕಿ ನಮಗೆ ಸಮಸ್ಯೆ ಹೇಳ್ತೀರಾ ಎಂಬ ಸಿಎಂ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿ, ರಾಜಕೀಯದಲ್ಲಿ ಕೆಲವೊಮ್ಮೆ ವಾಸ್ತವವನ್ನು ಮಾತನಾಡಬೇಕಾಗುತ್ತದೆ. ಆದರೆ, ಅದು ಕೆಲವರಿಗೆ ಹಿಡಿಸುವುದಿಲ್ಲ. ಅದನ್ನೇ ಮುಂದಿಟ್ಟುಕೊಂಡು ಟೀಕೆ ಮಾಡುವುದು ಸರಿಯಲ್ಲ. ಗ್ರಾಮ ವಾಸ್ತವ್ಯದ ಮೂಲಕ ಮುಖ್ಯಮಂತ್ರಿಗಳು ಸಾವಿರಾರು ಜನರಿಗೆ ಸ್ಪಂದಿಸುತ್ತಿದ್ದಾರೆ. ಆದರೆ ಕೆಲವರು ಮೊಸರಲ್ಲಿ ಕಲ್ಲು ಹುಡುಕುತ್ತಿದ್ದಾರೆ ಎಂದು ಬಿಜೆಪಿಯವರಿಗೆ ಟಾಂಗ್ ನೀಡಿದರು.
ಇನ್ನು, ರಾಜ್ಯ ಸಮ್ಮಿಶ್ರ ಸರ್ಕಾರ ಕೆಡವಲು ಬಿಜೆಪಿ ದುಷ್ಟ ಹಾಗೂ ವಾಮಮಾರ್ಗದ ಮೂಲಕ ಪ್ರಯತ್ನ ಮಾಡುತ್ತಿದೆ. ಕಳೆದ ಒಂದು ವರ್ಷದಿಂದ ಸಮ್ಮಿಶ್ರ ಸರ್ಕಾರವನ್ನು ಬೀಳಿಸಲು ವಿರೋಧ ಪಕ್ಷ ಬಿಜೆಪಿ ವಾಮಮಾರ್ಗವನ್ನು ಬಳಸುತ್ತಿದೆ. ಶಾಸಕರನ್ನು ಖರೀದಿ ಮಾಡುವುದರಿಂದ ಹಿಡಿದು ದುಷ್ಟ ಹಾಗೂ ವಾಮಮಾರ್ಗ ಬಳಸಿ ಸರ್ಕಾರ ಕೆಡವಲು ಯತ್ನ ನಡೆಸಿದೆ. ಈಗಲೂ ಅದನ್ನು ಮುಂದುವರೆಸಿದೆ. ಆ ಎಲ್ಲ ವಾಮಮಾರ್ಗ ಮೀರಿ ನಿಂತು ನಾವು ಸರ್ಕಾರ ನಡೆಸುತ್ತಿದ್ದೇವೆ. ರಾಜ್ಯ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.