ಕೊಪ್ಪಳ: ನಗರದ ಕಿಮ್ಸ್ನಲ್ಲಿ ಸ್ಥಾಪಿಸಲಾಗಿರುವ ಕೊರೊನಾ ಪರೀಕ್ಷೆ ನೂತನ ಲ್ಯಾಬ್ಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಇಂದು ಚಾಲನೆ ನೀಡಿದರು.
ನೂತನ ಲ್ಯಾಬ್ಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಚಿವ ಬಿ.ಸಿ.ಪಾಟೀಲ್, 23.75 ಲಕ್ಷ ರೂಪಾಯಿ ವೆಚ್ಚದಲ್ಲಿ ಸಿವಿಲ್ ಕಾಮಗಾರಿ ಹಾಗೂ 111.93 ಲಕ್ಷ ರೂಪಾಯಿ ಅಂದಾಜು ವೆಚ್ಚದಲ್ಲಿ ಉಪಕರಣಗಳನ್ನು ಖರೀದಿಸಿ ನೂತನ ಲ್ಯಾಬ್ ಸ್ಥಾಪಿಸಲಾಗಿದ್ದು, ಇನ್ಮುಂದೆ ಜಿಲ್ಲೆಯ ಕೊರೊನಾ ಮಾದರಿಗಳ ಪರೀಕ್ಷೆ ಇದೇ ಲ್ಯಾಬ್ನಲ್ಲಿ ನಡೆಯಲಿದೆ. ಇಲ್ಲಿನ ಆರ್ಟಿಪಿಸಿಆರ್ ಉಪಕರಣದಲ್ಲಿ ಪ್ರತಿ ಶಿಫ್ಟ್ಗೆ 70ರಿಂದ 80 ಹಾಗೂ ಪ್ರತಿ ದಿನ 140ರಿಂದ 145 ಮಾದರಿಗಳನ್ನು ಪರೀಕ್ಷೆ ಮಾಡಬಹುದು. ಟ್ರೂನ್ಯಾಟ್ ಉಪಕರಣದಲ್ಲಿ ಪ್ರತಿ ಶಿಫ್ಟ್ಗೆ 20ರಿಂದ 25 ಹಾಗೂ ಪ್ರತಿ ದಿನ 40ರಿಂದ 50 ಮಾದರಿಗಳನ್ನು ಪರೀಕ್ಷೆ ಮಾಡಬಹುದು ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಈವರೆಗೆ ಒಟ್ಟು 4504 ಜನರ ಮಾದರಿ ಸಂಗ್ರಹಿಸಲಾಗಿದೆ. ಈ ಪೈಕಿ 4314 ಜನರ ವರದಿ ನೆಗೆಟಿವ್ ಬಂದಿದ್ದು, 4 ಜನರಿಗೆ ಸೋಂಕು ತಗುಲಿರೋದು ದೃಢವಾಗಿದೆ. 190 ಜನರ ಲ್ಯಾಬ್ ವರದಿ ಇನ್ನೂ ಬರಬೇಕಿದೆ. ಸೋಂಕು ದೃಢವಾದ ನಾಲ್ವರ ಪೈಕಿ ಈಗಾಗಲೇ ಮೂರು ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೊಬ್ಬ ಸೋಂಕಿತನಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿಸಿದರು.
ಈ ಲ್ಯಾಬ್ನಲ್ಲಿ ಈಗಾಗಲೇ 55 ಜನರ ಮಾದರಿ ಪರೀಕ್ಷೆ ಮಾಡಲಾಗಿದ್ದು, ಎಲ್ಲಾ ಸ್ಯಾಂಪಲ್ಸ್ ವರದಿ ನೆಗೆಟಿವ್ ಬಂದಿದೆ. ಇಲ್ಲಿಯವರೆಗೆ ಸ್ಯಾಂಪಲ್ಗಳನ್ನು ಬಳ್ಳಾರಿ ಹಾಗೂ ಬೆಂಗಳೂರಿನ ಲ್ಯಾಬ್ಗಳಿಗೆ ಕಳಿಸಲಾಗುತ್ತಿತ್ತು. ಈಗ ಕೊಪ್ಪಳದಲ್ಲಿಯೇ ಲ್ಯಾಬ್ ಆರಂಭವಾಗಿದೆ. ಇನ್ಮುಂದೆ ಜಿಲ್ಲೆಯ ಸ್ಯಾಂಪಲ್ಗಳ ಪರೀಕ್ಷೆ ಇಲ್ಲಿಯೇ ನಡೆಯಲಿದೆ ಎಂದು ಸಚಿವ ಬಿ.ಸಿ.ಪಾಟೀಲ್ ಹೇಳಿದರು.