ಗಂಗಾವತಿ: ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಹಾಗೂ ಪ್ರವಾಸೋದ್ಯಮ ನಿಗಮದ ಅಧ್ಯಕ್ಷೆ ನಟಿ ಶೃತಿ ತಾಲೂಕಿನ ಅಂಜನಾದ್ರಿ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಹಂಪಿಯಿಂದ ರಸ್ತೆ ಮಾರ್ಗದ ಮೂಲಕ ಆಗಮಿಸಿದ ಇಬ್ಬರೂ ಸುಮಾರು 572 ಮೆಟ್ಟಿಲುಗಳ ಎತ್ತರದಲ್ಲಿರುವ ಬೆಟ್ಟ ಹತ್ತಿದರು. ದೇವರ ದರ್ಶನದ ಬಳಿಕ ದೇಗುಲದ ಆವರಣದಲ್ಲಿಯೇ ಉಪಹಾರ ಸೇವಿಸಿದರು. ಬಳಿಕ ಮಾತನಾಡಿದ ಸಚಿವ ಯೋಗೇಶ್ವರ್, ಪ್ರವಾಸೋದ್ಯಮ ಇಲಾಖೆಯಡಿ ಬರುವ ತಾಣಗಳ ಅಭಿವೃದ್ದಿ ವಿಚಾರವಾಗಿ ಅಧಿಕಾರಿಗಳೊಂದಿಗೆ ಚರ್ಚಿಸಲು ಬಂದಿದ್ದೇನೆ. ಈ ಸಂದರ್ಭದಲ್ಲಿ ಯಾವುದೇ ರಾಜಕೀಯ ವಿಚಾರದ ಬಗ್ಗೆ ಮಾತನಾಡಲು ಇಚ್ಚಿಸುವುದಿಲ್ಲ ಎಂದರು. ಇದರ ಜೊತೆಗೆ, ಬಿಎಸ್ವೈ ನಮ್ಮ ನಾಯಕರು. ಅವರೇ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದು ಅಚ್ಚರಿಯ ಹೇಳಿಕೆಯನ್ನೂ ನೀಡಿದರು.
ಈ ಸಂದರ್ಭ ಸ್ಥಳೀಯ ಶಾಸಕ ಪರಣ್ಣ ಮುನವಳ್ಳಿ ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಸ್ಥಳೀಯರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾಧಿಕಾರದ ವ್ಯಾಪ್ತಿಯನ್ನು ಬದಲಿಸಬೇಕು. ಇಲ್ಲವೇ ಅಭಿವೃದ್ಧಿಗೆ ಪೂರಕವಾಗಿ ನಿರ್ಮಾಣವಾಗುವ ಕಾಮಗಾರಿಗಳಿಗೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.
ಬಳಿಕ ಸಚಿವ ಯೋಗೇಶ್ವರ್ ಹಾಗೂ ನಟಿ ಶೃತಿ ಆನೆಗೊಂದಿಯ ಪುರಾತನ ಶೈಲಿಯ ಅರಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಸಹಾಯಕ ಆಯುಕ್ತ ನಾರಾಯಣ ಕನಕ ರೆಡ್ಡಿ, ತಹಶೀಲ್ದಾರ್ ಯು.ನಾಗರಾಜ್ ಇತರರು ಇದ್ದರು.