ಕೊಪ್ಪಳ: ಅನರ್ಹ ಶಾಸಕರ ಬಗ್ಗೆ ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧ ಎಂದು ಸಚಿವ ಸಿ.ಸಿ. ಪಾಟೀಲ್ ಹೇಳಿದ್ದಾರೆ. ಕೊಪ್ಪಳದಲ್ಲಿ ಮಾತನಾಡಿದ ಅವರು, ಪಕ್ಷಕ್ಕಿಂತ ನಾವು ದೊಡ್ಡವರಲ್ಲ, ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದರು.
ಉಪಚುನಾವಣೆಯ ಸಿದ್ದತಾ ಸಭೆಯಲ್ಲಿ ಸಿಎಂ ಬಿಎಸ್ವೈ ಬೇಸರ ವ್ಯಕ್ತಪಡಿಸಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದೆಲ್ಲ ಸತ್ಯಕ್ಕೆ ದೂರವಾದ ಮಾತು. ಯಡಿಯೂರಪ್ಪರಿಗೆ ಬೇಸರವಾಗಿದ್ದನ್ನು ನಿಮಗೆ ಯಾರು ಹೇಳಿದರು? ಎಂದು ಮರು ಪ್ರಶ್ನಿಸಿದರು.
ಉಪಚುನಾವಣೆಯ ಏಳೆಂಟು ಮತ ಕ್ಷೇತ್ರದ ಕುರಿತಾಗಿ ಈಗಾಗಲೇ ಸಿದ್ದತೆ ಸಭೆ ನಡೆದಿದೆ. ಒಂದೆರಡು ಕ್ಷೇತ್ರದಲ್ಲಿ ಸಣ್ಣಪುಟ್ಟ ಗೊಂದಲಗಳಿವೆ ನಿಜ. ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಯಡಿಯೂರಪ್ಪ, ಪಕ್ಷದ ಅಧ್ಯಕ್ಷರು ಹಾಗೂ ಕೋರ್ ಕಮಿಟಿಯ ತೀರ್ಮಾನವೇ ಅಂತಿಮವಾಗಿರುತ್ತದೆ. ಉಪ ಚುನಾವಣೆಯನ್ನು ನಾವು ಯಶಸ್ವಿಯಾಗಿ ಗೆಲ್ಲುತ್ತೇವೆ. ಬಿಜೆಪಿಯಿಂದ ಯಾರೇ ಅಭ್ಯರ್ಥಿಯಾದರೂ ನಾವು ಅವರನ್ನು ಗೆಲ್ಲಿಸುತ್ತೇವೆ ಎಂದರು.