ಕುಷ್ಟಗಿ(ಕೊಪ್ಪಳ): ಮಾಜಿ ಸಿಎಂ ಸಿದ್ದರಾಮಯ್ಯ ಅವರು ಯಾವ ಮಾನದಂಡವಿಟ್ಟುಕೊಂಡು ಸಿಎಂ ಬದಲಾವಣೆ ಬಗ್ಗೆ ಹೇಳಿಕೆ ನೀಡ್ತಾರೋ ಗೊತ್ತಿಲ್ಲ. ಅವರು ಯಾವಾಗ ಜ್ಯೋತಿಷಿ ಆಗಿದ್ದಾರೆಯೋ ಗೊತ್ತಿಲ್ಲ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ವ್ಯಂಗ್ಯವಾಡಿದರು.
ತಿಂಥಣಿ ಬ್ರಿಡ್ಜ್ ನಲ್ಲಿ ಹಾಲುಮತ ಉತ್ಸವ ಕಾರ್ಯಕ್ರಮಕ್ಕೆ ತೆರಳುವ ಮಾರ್ಗದಲ್ಲಿ ಕುಷ್ಟಗಿ ಸರ್ಕ್ಯೂಟ್ ಹೌಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆಯ ಮಾತೇ ಇಲ್ಲ. ಮುಂದಿನ ಎರಡು ವರ್ಷ ನಾಲ್ಕು ತಿಂಗಳ ಕಾಲ ಬಿಎಸ್ವೈ ಅವರೇ ಸಿಎಂ ಆಗಿ ಕಾರ್ಯನಿರ್ವಹಿಸುತ್ತಾರೆ. ನೀವು(ಮಾಧ್ಯಮದವರು) ಅವರನ್ನೇ ವಿವರವಾಗಿ ಕೇಳಬೇಕಿದೆ ಎಂದರು.
ಸಂಪುಟ ಪುನರ್ರಚನೆ ಕುರಿತು ಪ್ರಸ್ತಾಪಿಸಿದ ಅವರು, ಮುಂದಿನ ಸಂಪುಟ ಪುನಾರಚನೆ ವೇಳೆಯಲ್ಲಿ ಸಿಎಂ ಯಡಿಯೂರಪ್ಪ ಅವರು ಕೊಟ್ಟ ಮಾತಿಗೆ ತಪ್ಪುವುದಿಲ್ಲ ಎನ್ನುವ ವಿಶ್ವಾಸವಿದೆ. ನಮ್ಮ ಜೊತೆಗೆ ಬಂದಿರುವ ಎಲ್ಲರಿಗೂ ಸಚಿವ ಸ್ಥಾನಕ್ಕೆ ಪರಿಗಣಿಸುವ ವಿಶ್ವಾಸವಿದೆ. ಈ ಬಗ್ಗೆ ನಾವು ಕೂಡ ಮನವಿ ಮಾಡಿದ್ದು, ಇದಕ್ಕೆ ಸಿಎಂ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.
ನಗರಾಭಿವೃದ್ಧಿಯಲ್ಲಿ ಅಮೂಲಾಗ್ರವಾಗಿ ಬದಲಾವಣೆ ತರಲು ಬದ್ಧನಾಗಿರುವೆ ಎಂದ ಅವರು, ಪ್ರತಿ ಜಿಲ್ಲೆಗೂ ಪ್ರವಾಸ ಮಾಡಿದ್ದೇನೆ. ಯಾವುದೇ ಕಾರಣಕ್ಕೂ ನಗರಾಭಿವೃದ್ಧಿ ಖಾತೆ ಬದಲಿಸುವುದಿಲ್ಲ.
ಇದೇ ಖಾತೆಯಲ್ಲಿ ಮುಂದುವರೆಯುವೆ. ನಗರಾಭಿವೃದ್ಧಿ ಇಲಾಖೆಯ ಸಾಧಕ-ಬಾಧಕಗಳ ಬಗ್ಗೆ ಉನ್ನತ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಓದಿ: ನಾಳೆ ಸಚಿವ ಸಂಪುಟ ವಿಸ್ತರಣೆ ಇದೆ.. ಸದ್ಯ ಚರ್ಚೆ ಅನಗತ್ಯ ಎಂದ ಡಿಸಿಎಂ ಸವದಿ
ಕುರುಬರ ಸಮಾಜಕ್ಕೆ ಎಸ್ಟಿ ಮೀಸಲಾತಿಯ ಬಗ್ಗೆ ಕೇಂದ್ರಕ್ಕೆ ಶಿಫಾರಸು ಮಾಡುವುದು ಸಿಎಂ ಹಾಗೂ ಹಿರಿಯ ನಾಯಕರ ವಿವೇಚನೆಗೆ ಬಿಟ್ಟಿದೆ ಎಂದರು. ಈ ವೇಳೆ ಮಾಜಿ ಶಾಸಕ ಜಿಲ್ಲಾ ಬಿಜೆಪಿ ಅಧ್ಯಕ್ಷ ದೊಡ್ಡನಗೌಡ ಪಾಟೀಲ, ಮಾಜಿ ಶಾಸಕ ಕೆ.ಶರಣಪ್ಪ, ಬಿಜೆಪಿ ಅಧ್ಯಕ್ಷ ಬಸವರಾಜ್ ಹಳ್ಳೂರು ಮತ್ತಿತರಿದ್ದರು.