ಗಂಗಾವತಿ (ಕೊಪ್ಪಳ) : ರಸ್ತೆ ಬದಿಯಲ್ಲಿ ಹೊರಟಿದ್ದ ಕುರಿಗಳ ಹಿಂಡಿನ ಮೇಲೆ ಮಿನಿ ಲಾರಿಯೊಂದು ಹರಿದು 40ಕ್ಕೂ ಹೆಚ್ಚು ಕುರಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಕುರಿಗಳು ತೀವ್ರವಾಗಿ ಗಾಯಗೊಂಡಿರುವ ಘಟನೆ ಕಾರಟಗಿ ತಾಲ್ಲೂಕಿನ ಸಿದ್ದಾಪುರದ ಹೊರವಲಯದ ಗುಂಡೂರು ಕ್ರಾಸ್ ಬಳಿ ಸಂಭವಿಸಿದೆ. ಘಟನೆಯಲ್ಲಿ ಸಾವನ್ನಪ್ಪಿದ ಕುರಿಗಳು ಕನಕಗಿರಿಯ ಕನಕಪ್ಪ ಗೊಲ್ಲರ ಎಂಬುವವರಿಗೆ ಸೇರಿವೆ ಎಂದು ತಿಳಿದು ಬಂದಿದೆ.
ಇಂದು ಕನಕಪ್ಪ ಗೊಲ್ಲರ ತನ್ನ 70ಕ್ಕೂ ಹೆಚ್ಚು ಕುರಿಗಳನ್ನು ಸಿದ್ದಾಪುರದಿಂದ ಹಣವಾಳ ಗ್ರಾಮಕ್ಕೆ ಗಂಗಾವತಿ-ರಾಯಚೂರು ರಾಜ್ಯ ಹೆದ್ದಾರಿಯ ಮೂಲಕ ಕರೆದೊಯ್ಯುತ್ತಿದ್ದರು. ಗಂಗಾವತಿಯಿಂದ ಸಿದ್ದಾಪುರ ಕಡೆ ಬರುತ್ತಿದ್ದ, ಸಿದ್ದಾಪುರ ಗ್ರಾಮದ ಎಂಡಿಎಸ್ ಡೆಕೋರೇಟರ್ಸ್ ಮಾಲೀಕ ಹಾಗು ಬಿಜೆಪಿಯ ನಾಯಕ ಮಹೇಬೂಬ್ ಮುಲ್ಲಾ ಎಂಬುವವರಿಗೆ ಸೇರಿದ್ದು ಎನ್ನಲಾದ ಮಿನಿ ಲಾರಿ ರಭಸವಾಗಿ ಕುರಿಗಳ ಹಿಂಡಿನ ಮೇಲೆ ಹರಿದಿದೆ. ಪರಿಣಾಮ ಸ್ಥಳದಲ್ಲಿಯೇ 40ಕ್ಕೂ ಹೆಚ್ಚು ಕುರಿಗಳು ಮೃತಪಟ್ಟರೆ, 30ಕ್ಕೂ ಹೆಚ್ಚು ಕುರಿಗಳ ಕಾಲು, ಕತ್ತು, ಹೊಟ್ಟೆ ಭಾಗ ಸೇರಿದಂತೆ ಇನ್ನಿತರ ದೇಹದ ಭಾಗಗಳಿಗೆ ತೀವ್ರತರವಾದ ಗಾಯಗಳಾಗಿವೆ.
ಕಣ್ಣಿರಿಟ್ಟ ಕುಟುಂಬ : ಸುದ್ದಿ ತಿಳಿಯುತ್ತಿದ್ದಂತೆ ಕನಕಗಿರಿಯಿಂದ ಘಟನಾ ಸ್ಥಳಕ್ಕೆ ಬಂದ ಕನಕಪ್ಪ ಗೊಲ್ಲರ ಮತ್ತು ಕುಟುಂಬ ಸದಸ್ಯರು, ಕುರಿಗಳು ಸಾವಿಗೀಡಾದ ಭೀಕರ ದೃಶ್ಯ ಕಂಡು ಕಣ್ಣೀರಿಟ್ಟರು. ಕುಟುಂಬ ಆದಾಯದ ಮೂಲವಾಗಿದ್ದ ಕುರಿಗಳ ಸಾವಿನಿಂದ ಕನಕಪ್ಪನ ಕುಟುಂಬ ಆಘಾತಕ್ಕೊಳಗಾಗಿದೆ. ಇದೇ ವೇಳೆ ಮಾತನಾಡಿದ ಕುಟುಂಬಸ್ಥರು, ಕಳೆದ ಹತ್ತು ವರ್ಷದಿಂದ ಕುರಿ ಸಾಕಾಣಿಕೆ ಮಾಡುತ್ತಿದ್ದು ಕೇವಲ ಐದು ಕುರಿಯಿಂದ ಆರಂಭಿಸಿದ್ದ ಕುರಿ ಸಾಕಾಣಿಕೆ ಇದೀಗ 80ಕ್ಕೆ ಬಂದಿತ್ತು. ನಮ್ಮ ಇಡೀ ಕುಟುಂಬ ಕುರಿಸಾಕಾಣಿಕೆಯನ್ನೇ ಅವಲಂಭಿಸಿದೆ. ಆದರೆ ವಾಹನ ಚಾಲಕ ಮಾಡಿದ ಪ್ರಮಾದದಿಂದಾಗಿ ಮಕ್ಕಳಂತಿದ್ದ ಕುರಿಗಳನ್ನು ಕಳೆದುಕೊಂಡು ನಾವು ಬೀದಿಪಾಲಾಗಿದ್ದೇವೆ ಎಂದು ಹೇಳಿದರು.
ಸ್ಥಳಕ್ಕೆ ಕಾರಟಗಿ ಪೊಲೀಸರು ಮತ್ತು ಸಿದ್ದಾಪುರ ಪಶು ಆಸ್ಪತ್ರೆ ವೈದ್ಯ ಡಾ.ಝಾಕೀರ್ ಹುಸೇನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳದಲ್ಲೇ ವಾಹನ ಬಿಟ್ಟು ಚಾಲಕ ಪರಾರಿಯಾಗಿದ್ದಾರೆ.
ಇದನ್ನೂ ಓದಿ : ನಾಯಿ ಗಲೀಜು ಮಾಡುವ ವಿಚಾರಕ್ಕೆ ಗಲಾಟೆ: ಬ್ಯಾಟ್ ನಿಂದ ಹೊಡೆದು ವೃದ್ಧನ ಹತ್ಯೆ