ಕೊಪ್ಪಳ: ಜಿಲ್ಲೆಯಲ್ಲಿ ವಾರ್ಡ್ವಾರು ತರಕಾರಿ ಪೂರೈಸಲಾಗುತ್ತಿದೆ. ಅದನ್ನು ಮುಂದುವರೆಸಿ. ರಾಜ್ಯದಲ್ಲಿ ಪಡಿತರವನ್ನು ಮನೆಗೆ ನೇರವಾಗಿ ನೀಡಲು ಉದ್ದೇಶಿಸಲಾಗಿದೆ. ಈ ಪರಿಸ್ಥಿತಿಯಲ್ಲಿ ಅನಗತ್ಯವಾಗಿ ಓಡಾಡುವ ಪೋಲಿಗಳನ್ನು ಪೊಲೀಸರು ಬೆತ್ತದಿಂದ ಹೊಡೆಯುತ್ತಿರುವುದು ಕಂಡುಬರುತ್ತಿದೆ. ಅದರ ಬದಲಿಗೆ ಠಾಣೆಯಲ್ಲೇ ಅನ್ನ ನೀರು ಕೊಡದೇ ಒಂದು ದಿನ ಕೂಡಿಹಾಕಿ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಹೊಸಪೇಟೆಯ ಅಮರಾವತಿ ಅತಿಥಿಗೃಹದಲ್ಲಿ ಕೋವಿಡ್-19 ಹಿನ್ನೆಲೆ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾಡಳಿತದೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಕೋವಿಡ್-19 ವ್ಯಾಪಕವಾಗಿ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದಲ್ಲಿ ಯಾವುದೇ ರೀತಿಯ ಹಣದ ಕೊರತೆ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.
ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಇದುವರೆಗೆ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿಲ್ಲ. ಇದು ಅತ್ಯಂತ ಖುಷಿಯ ಸಂಗತಿ. ಹೊರಗಡೆಯಿಂದ ಬಂದ ಜನರ ಮೇಲೆ ತೀವ್ರ ನಿಗಾವಹಿಸಿ ಮತ್ತು ಆರೋಗ್ಯ ಏರುಪೇರಾದಲ್ಲಿ ಕೂಡಲೇ ಚಿಕಿತ್ಸೆ ನೀಡಬೇಕು ಎಂದರು.
ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮಾತನಾಡಿ, ಜಿಲ್ಲೆಯಲ್ಲಿ 16,791 ಜನರಿಗೆ ತಪಾಸಣೆ ಮಾಡಲಾಗಿದೆ. 32 ಸ್ಯಾಂಪಲ್ ಕಳುಹಿಸಲಾಗಿತ್ತು. ಅದರಲ್ಲಿ 6ಮಂದಿ ವರದಿಗಾಗಿ ಕಾಯುತ್ತಿದ್ದೇವೆ. ಉಳಿದವು ನೆಗೆಟಿವ್ ಬಂದಿದೆ ಎಂದ ಅವರು ಮಾಸ್ಕ್, ಸ್ಯಾನಿಟೈಸರ್, ಗ್ಲೌಸ್ ಸೇರಿದಂತೆ ಎಲ್ಲವೂ ನಮ್ಮಲ್ಲಿ ಲಭ್ಯವಿವೆ. 28 ರ್ಯಾಪಿಡ್ ರೆಸ್ಪಾನ್ಸ್ ತಂಡಗಳು, 17 ಸಮಿತಿಗಳನ್ನು ರಚಿಸಲಾಗಿದೆ ಎಂದರು.