ಕೊಪ್ಪಳ: ಮುಸ್ಲಿಂ ಸಮುದಾಯಕ್ಕೆ 2ಬಿ ಮೀಸಲಾತಿ ರದ್ದುಪಡಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕೊಪ್ಪಳದಲ್ಲಿ ಮುಸ್ಲಿಂ ಸಮುದಾಯದಿಂದ ಬೃಹತ್ ಪ್ರತಿಭಟನೆ ನಡೆಯಿತು.
ಕೊಪ್ಪಳದ ಗಡಿಯಾರ ಕಂಬದ ಸರ್ಕಲ್ನಿಂದ ಅಶೋಕ ಸರ್ಕಲ್ವರೆಗೆ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಇತರ ಸಮುದಾಯಗಳಿಗೆ ಮೀಸಲಾತಿ ನೀಡಲು ನಮ್ಮ ಸಮುದಾಯದ ಮೀಸಲಾತಿ ತೆಗೆದುಹಾಕಿದ್ದು ನಮಗೆ ಮಾಡಿದ ಅನ್ಯಾಯವಾಗಿದೆ. ಬೇರೆ ಸಮುದಾಯಗಳಿಗೆ ಮೀಸಲಾತಿ ನೀಡುವುದನ್ನು ನಾವು ವಿರೋಧಿಸುತ್ತಿಲ್ಲ. ಆದರೆ, ನಮ್ಮ ಮೀಸಲಾತಿ ತೆಗೆದು ಸರ್ಕಾರ ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ವಿವಿಧ ಸಮುದಾಯಗಳ ಮುಖಂಡರೂ ಭಾಗಿಯಾಗಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಯಮನೂರಪ್ಪ ನಾಯಕ್, ಕಾಂಗ್ರೆಸ್ ನ ಕಾಟನ ಪಾಷಾ, ಕೆ.ಎಂ. ಸಯ್ಯದ್, ಅಮ್ಜದ್ ಪಟೇಲ್, ಜೆಡಿಎಸ್ ಜಿಲ್ಲಾದ್ಯಕ್ಷ ವಿರೇಶ ಮಹಾಂತಯ್ಯನಮಠ, ಮಲ್ಲು ಪೂಜಾರ ಸೇರಿದಂತೆ ಇತರರು ಭಾಗಿಯಾಗಿದ್ದರು.
ಬಿಎಸ್ವೈ ಮನೆ ಮೇಲೆ ಕಲ್ಲು ತೂರಾಟ: ಇನ್ನೊಂದೆಡೆ ಒಳಮೀಸಲಾತಿಯಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ ಬಂಜಾರ ಸಮುದಾಯ ಶಿಕಾರಿಪುರದಲ್ಲಿ ಪ್ರತಿಭಟನೆ ನಡೆಸುತ್ತಿದೆ. ಈ ವೇಳೆ ಶಿಕಾರಿಪುರದಲ್ಲಿ ಕೆಲ ಪ್ರತಿಭಟನಾಕಾರರಿಂದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಮನೆಯ ಮೇಲೆ ಕಲ್ಲು ತೂರಾಟ ನಡೆದಿದೆ.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಒಳಮೀಸಲಾತಿಯಲ್ಲಿ ಬಂಜಾರ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿ, ಸಮುದಾಯದ ಜನರು ಶಿಕಾರಿಪುರದಲ್ಲಿ ಇಂದು ಪ್ರತಿಭಟನೆ ಹಮ್ಮಿಕೊಂಡಿದ್ದರು. ಅಂಬೇಡ್ಕರ್ ವೃತ್ತದಿಂದ ತಾಲೂಕು ಆಡಳಿತ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಮನವಿ ಸಲ್ಲಿಸುವ ತಯಾರಿಯಲ್ಲಿದ್ದರು.
ತಾಲೂಕು ಆಡಳಿತ ಭವನದ ಕಡೆಗೆ ಪ್ರತಿಭಟನಾ ಮೆರವಣಿಗೆ ಬರುತ್ತಿತ್ತು. ಈ ವೇಳೆ ಕೆಲ ಪ್ರತಿಭಟನಾಕಾರರು, ಬಿಜೆಪಿ ಹಿರಿಯ ನಾಯಕ ಯಡಿಯೂರಪ್ಪ ಅವರ ನಿವಾಸವಿರುವ ಮಾಳೇರಕೇರಿ ಮನೆಯ ಕಡೆಗೆ ತೆರಳಿ ಕಲ್ಲು ತೂರಾಟ ನಡೆಸಿದರು. ಇದರಿಂದ ಕಿಟಕಿಯ ಗಾಜುಗಳು ಒಡೆದು ಹೋಗಿವೆ. ಈ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ ಎಂಬುದು ತಿಳಿದುಬಂದಿದೆ. ಕೂಡಲೇ ಪೊಲೀಸ್ ಸಿಬ್ಬಂದಿ ಅವರ ಮನೆಗೆ ಭದ್ರತೆ ನೀಡಿದ್ದಾರೆ. ಮನೆಯ ಮುಂದೆ ತಾಲೂಕು ಆಡಳಿತದಿಂದ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ. ಸ್ಥಳದಲ್ಲಿ ಶಿಕಾರಿಪುರ ಡಿವೈಎಸ್ಪಿ ಹಾಜರಿದ್ದಾರೆ ಎಂಬುದು ತಿಳಿದುಬಂದಿದೆ.
ಇದನ್ನೂ ಓದಿ : ಒಳಮೀಸಲಾತಿ ವಿಚಾರ.. ಪ್ರತಿಭಟನೆ ವೇಳೆ ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ
ಪ್ರತಿಭಟನೆಯ ವೇಳೆ ಬಿಜೆಪಿಯ ಫ್ಲೆಕ್ಸ್ಗಳನ್ನೂ ಕಿತ್ತು ಹಾಕಿದ್ದಾರೆ. ಇದೇ ವೇಳೆ ಟೈರ್ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ಬ್ಯಾರಿಕೇಡ್ ದಾಟಿ ನುಗ್ಗಲು ಯತ್ನಿಸಿದ ಆಕ್ರೋಶಿತ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದ್ದಾರೆ.
2ಬಿ ಮೀಸಲಾತಿ ರದ್ದು : ಒಬಿಸಿ ಮೀಸಲಾತಿ ಪಟ್ಟಿಯಲ್ಲಿ ಮುಸ್ಲಿಮರಿಗೆ ನೀಡಲಾಗಿದ್ದ ಶೇ. 4ರಷ್ಟು ಮೀಸಲಾತಿಯನ್ನು ರಾಜ್ಯ ಸರ್ಕಾರ ರದ್ದುಗೊಳಿಸಿದೆ. ಈ ಮೀಸಲಾತಿಯನ್ನು ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯಕ್ಕೆ ತಲಾ ಶೇ. 2ರಷ್ಟು ಹಂಚಿಕೆ ಮಾಡಿದೆ.
ಇಡಬ್ಯೂಎಸ್ ಕೋಟಾಕ್ಕೆ ಸ್ಥಳಾಂತರ: ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, 2ಬಿಯಲ್ಲಿದ್ದ ಮುಸ್ಲಿಂ ಸಮುದಾಯವನ್ನು ಶೇ.10ರಷ್ಟು ಮೀಸಲಾತಿ ಇರುವ ಆರ್ಥಿಕವಾಗಿ ಹಿಂದುಳಿದ ವರ್ಗ(EWS) ಕೋಟಾಕ್ಕೆ ಸ್ಥಳಾಂತರಿಸಿದೆ.
ಇದನ್ನೂ ಓದಿ : 2ಬಿ ಮೀಸಲಾತಿ ರದ್ದು: ರಾಜ್ಯಪಾಲರಿಗೆ ದೂರು ನೀಡಲು ಎಎಪಿ ನಿರ್ಧಾರ