ಕೊಪ್ಪಳ: ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸದಿದ್ದರೆ ಜುಲೈ 20ರಂದು ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎಂದು ಗುತ್ತಿಗೆ ಆಧಾರಿತ ಆಯುಷ್ ವೈದ್ಯರು ಹೇಳುತ್ತಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಗುತ್ತಿಗೆ ಆಧಾರಿತ ಆಯುಷ್ ವೈದ್ಯರ ಸಂಘದ ಮುಖಂಡರು, ಎನ್ಆರ್ಎಚ್ಎಂ, ಆರ್ಬಿಎಸ್ಕೆ ಸೇರಿದಂತೆ ಇತರೆ ಯೋಜನೆಗಳಲ್ಲಿ ಕೊಪ್ಪಳದಲ್ಲಿ 67 ಹಾಗೂ ರಾಜ್ಯದಲ್ಲಿ 2 ಸಾವಿರ ಆಯುಷ್ ವೈದ್ಯರು ಕೆಲಸ ಮಾಡುತ್ತಿದ್ದಾರೆ. ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಉದ್ಯೋಗ ಭದ್ರತೆ ನೀಡಬೇಕು ಎಂದು ಒತ್ತಾಯಿಸಿದರು.
ಉಳಿದ ವೈದ್ಯರಂತೆ ನಾವೂ ಸಹ ಸಮಾನವಾಗಿ ಕೆಲಸ ಮಾಡುತ್ತೇವೆ. ಆದರೆ, ವೇತನದಲ್ಲಿ ತಾರತಮ್ಯ ಮಾಡಲಾಗುತ್ತಿದೆ. ನಮಗೆ ₹20 ಸಾವಿರದಿಂದ ₹26 ಸಾವಿರ ವೇತನ ನೀಡಲಾಗುತ್ತಿದೆ. ಇಷ್ಟು ಕಡಿಮೆ ವೇತನದಲ್ಲಿ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. ಕೊರೊನಾ ವಾರಿಯರ್ಸ್ಗೆ ನೀಡುವ ವಿಮೆ ನಮಗೆ ಏಕಿಲ್ಲ. ಯಾವುದೇ ಭದ್ರತೆಯೂ ಇಲ್ಲ. ನಮ್ಮ ವಯೋಮಿತಿ ಮೀರುತ್ತಿದೆ. ನಾವೂ ಸಹ ಮನುಷ್ಯರೇ ಅಲ್ಲವೇ? ಎಂದು ಅಳಲು ತೋಡಿಕೊಂಡರು.
ಈಗಾಗಲೇ ಸಾಕಷ್ಟು ಬಾರಿ ಸರ್ಕಾರದ ಗಮನ ಸೆಳೆಯಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಬೇಸತ್ತು ರಾಜೀನಾಮೆಗೆ ಮುಂದಾಗುತ್ತೇವೆ. ಈ ಕುರಿತು ಈಗಾಗಲೇ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರಿಗೆ ಹೇಳುತ್ತಿದ್ದೇವೆ. ಸಮಯಾವಕಾಶ ಕೊಡಿ ಎಂದು ಅವರು ಹೇಳಿದ್ದಾರೆ. ಸರ್ಕಾರ ಕೂಡಲೇ ನಮ್ಮ ಬೇಡಿಕೆ ಈಡೇರಿಸಬೇಕು. ಇಲ್ಲವಾದಲ್ಲಿ ಜುಲೈ 20ರಂದು ನಾವು ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸುತ್ತೇವೆ ಎಂದು ಎಚ್ಚರಿಸಿದರು.