ಗಂಗಾವತಿ: ವಿಶ್ವವ್ಯಾಪಿ ಹರಡುತ್ತಿರುವ ಕೊರೊನಾ ಸಂಕಷ್ಟದಿಂದ ಪಾರು ಮಾಡುವಂತೆ ಬಸವ ಧರ್ಮ ಪೀಠದ ಜಗದ್ಗುರು ಗಂಗಾದೇವಿ ಅವರ ಕರೆಯ ಮೆರೆಗೆ ಅನುಯಾಯಿಗಳು ಸಾಮೂಹಿಕ ಇಷ್ಟಲಿಂಗ ಪೂಜೆ ನೆರವೇರಿಸಿದರು. ಬಸವಧರ್ಮದ ಎಲ್ಲಾ ಅನುಯಾಯಿಗಳು ಮನೆಯಲ್ಲೇ ಇದ್ದು, ನಿತ್ಯ ಇಷ್ಟಲಿಂಗ ಪೂಜೆ ಮಾಡಬೇಕು. ತಮ್ಮ ಕುಟುಂಬ ಮತ್ತು ಸಮಾಜ, ನೆರೆ ಹೊರೆಯವರು ಮತ್ತು ದೇಶಕ್ಕಾಗಿ ಪ್ರಾರ್ಥನೆ ಮಾಡಿ ಎಂದು ಗಂಗಾದೇವಿ ಸೂಚಿಸಿರುವುದಾಗಿ ರಾಷ್ಟ್ರೀಯ ಬಸವದಳದ ಗೌರವಾಧ್ಯಕ್ಷ ಹೆಚ್. ಮಲ್ಲಿಕಾರ್ಜುನ್ ಹೇಳಿದ್ದಾರೆ.
ಮುಖ್ಯವಾಗಿ ದೇಶದಿಂದ ಕೊರೊನಾ ತೊಲಗುವಂತೆ ಪ್ರಾರ್ಥನೆ ಮಾಡುತ್ತಿದ್ದು, ಈ ಸಂದರ್ಭದಲ್ಲಿ ಬಸವ ಭಾವ ಚಿತ್ರಕ್ಕೆ ಪೂಜೆ, ಬಸವ ಸ್ತುತಿ, ಬಸವ ಲಿಂಗ ಮಂತ್ರ ಪಠಣ ಮಾಡಿ ಜಗತ್ತಿನ ಮನುಕುಲಕ್ಕೆ ಶಾಂತಿ ನೀಡಲು ನಿತ್ಯ ಪ್ರಾರ್ಥಿಸಲಾಗುತ್ತಿದೆ ಎಂದು ಮಲ್ಲಿಕಾರ್ಜುನ್ ತಿಳಿಸಿದ್ದಾರೆ. ಮಾಜಿ ಸಚಿವ ಎಂ.ಬಿ. ಪಾಟೀಲ್, ಹಾವೇರಿಯ ಮಹೇಶ್ವರ ಸ್ವಾಮೀಜಿ, ಬಾಗಲಕೋಟೆ ಚರಂತಿಮಠದ ಪ್ರಭು ಸ್ವಾಮೀಜಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹಾಗೂ ಇನ್ನಿತರರು ಕೂಡಾ ಇಷ್ಟಲಿಂಗ ಪೂಜೆ ನೆರವೇರಿಸಿದ್ದಾರೆ.