ಗಂಗಾವತಿ: ಪ್ರಸಿದ್ಧ ಹಂಪಿ ಮತ್ತು ಆನೆಗೊಂದಿ ಪ್ರವಾಸಕ್ಕೆಂದು ಬರುತ್ತಿದ್ದ ವಿದೇಶಿಗರು ಸೇರಿದಂತೆ ಸ್ಥಳೀಯ ಪ್ರವಾಸಿಗರಿಗೆ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಜಾಲವನ್ನು ಬೇಧಿಸಿರುವ ಗ್ರಾಮೀಣ ಠಾಣೆಯ ಪೊಲೀಸರು ಆರು ಮಂದಿ ಯುವಕರನ್ನು ಬಂಧಿಸಿದ್ದಾರೆ. ತಾಲ್ಲೂಕಿನ ಸಣಾಪುರ ಗ್ರಾಮದಲ್ಲಿರುವ ಸಮತೋಲನಾ ಜಲಾಶಯದ (ಕೆರೆ) ಬಳಿಯ ವಾಟರ್ ಟ್ಯಾಂಕ್ ಹಿಂದೆ ನಶೆ ಉಂಟು ಮಾಡುವ ಪದಾರ್ಥಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ಮಾಡಿದ್ದಾರೆ.
ಆರೋಪಿಗಳು ಆನೆಗೊಂದಿ, ಸಣಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ನಾನಾ ರೆಸಾರ್ಟ್ಗಳಲ್ಲಿ ತಂಗುವ ಉದ್ದೇಶಕ್ಕೆ ಬರುತ್ತಿದ್ದ ವಿದೇಶಿಗರು ಮತ್ತು ಸ್ಥಳೀಯ ಪ್ರವಾಸಿಗರಿಗೆ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದರು ಎಂದು ಗೊತ್ತಾಗಿದೆ. ಬಂಧಿತರೆಲ್ಲರೂ ದಾವಣಗೆರೆ, ಶಿವಮೊಗ್ಗ, ವಿಜಯನಗರ, ಬಳ್ಳಾರಿ ಜಿಲ್ಲೆಗೆ ಸೇರಿದವರು. ಆರೋಪಿಗಳು ಚಾರ್ಟರ್ಡ್ ಅಕೌಂಟೆಂಟ್, ಎಂಜಿನಿಯರ್, ಟೆಕ್ಕಿ, ಪ್ಯಾರಾಮೆಡಿಕಲ್ ವಿದ್ಯಾರ್ಥಿ ಮತ್ತು ಫಾರ್ಮಾಸಿಸ್ಟ್ ವೃತ್ತಿ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಗ್ರಾಮೀಣ ಪಿಎಸ್ಐ ಮಂಜುನಾಥ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ತಪ್ಪಿಸಿಕೊಂಡು ಓಡಿ ಹೋಗಲು ವಿಫಲ ಯತ್ನ ನಡೆಸಿದ್ದರು. ವಿಜಯನಗರ ಜಿಲ್ಲೆಯ ಕಮಲಾಪುರದ ಫಾರ್ಮಾಸಿಸ್ಟ್ ಸಚಿನ್ ಕಾಶಿಪುರ, ದಾವಣಗೆರೆ ಜಿಲ್ಲೆಯ ಹರಿಹರದ ಪ್ಯಾರಾಮೆಡಿಕಲ್ ವಿದ್ಯಾರ್ಥಿ ಅಶ್ವಿನ್ ಲಾರೆನ್ಸ್, ಶಿವಮೊಗ್ಗ ಜಿಲ್ಲೆಯ ಮುದೇನೂರು ಗ್ರಾಮದ ಎಂಜಿನಿಯರಿಂಗ್ ವಿದ್ಯಾರ್ಥಿ ಕಿರಣ್ ಮುದೇನೂರು ಎಂಬುವರು ಪ್ರಕರಣದ ಬಂಧಿತ ಆರೋಪಿಗಳಾಗಿದ್ದಾರೆ.
ಇನ್ನುಳಿದವರನ್ನು ದಾವಣಗೆರೆ ಜಿಲ್ಲೆಯ ಹರಿಹರದ ಲೆಕ್ಕ ಪರಿಶೋಧಕ ನಿಖಿಲ್ ವಸಂತ ಕುಮಾರ, ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದ ಟಿ ಅಂಗಡಿ ಮಾಲೀಕ ಸುರೇಶ ಬೆಸ್ತರ ಹಾಗೂ ಕಾರಟಗಿ ತಾಲ್ಲೂಕಿನ ಉಳೇನೂರು ಕ್ಯಾಂಪಿನ ವಿದ್ಯಾರ್ಥಿ ಪೂರ್ಣಚಂದ್ರ ನೆಕ್ಕಂಟಿ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಅಂದಾಜು 3 ಸಾವಿರ ರೂಪಾಯಿ ಮೌಲ್ಯದ ಗಾಂಜಾ, ರಿನೋಲ್ಟ್ ಕಿಗರ್ ಕಂಪನಿಯ ಕಾರು, ಹೊಂಡಾ ಹಾರ್ನೆಟ್ ಬೈಕ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಮಹಿಳೆಯರ ಧ್ವನಿಯಲ್ಲಿ ಸಂಭಾಷಣೆ: ಸಂಬಂಧ ಬೆಸೆದು ಹಣ ಗಳಿಸುವ ಆಸೆ, ಯುವಕರಿಗೆ ವಂಚನೆ