ಕೊಪ್ಪಳ: ಈ ಹಿಂದೆ ಸಾಕಷ್ಟು ಸಮೀಕ್ಷೆಗಳು ಸುಳ್ಳಾದ ಉದಾಹರಣೆಗಳಿವೆ. ಸಮೀಕ್ಷೆಯಂತೆ ಫಲಿತಾಂಶ ಬಂದ ಇತಿಹಾಸವಿಲ್ಲ ಎಂದು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ, ವಾಜಪೇಯಿ ಅವರ ಅವಧಿಯಲ್ಲಿ ಚುನಾವಣೆಯ ಸಮೀಕ್ಷೆಗಳು ಸುಳ್ಳಾಗಿವೆ. ಚುನಾವಣೆಯ ಸಮೀಕ್ಷೆಗಳು ಸಾಕಷ್ಟು ಬಾರಿ ಹುಸಿಯಾಗಿವೆ. ಸಮೀಕ್ಷೆಯಂತೆ ಅದೆಷ್ಟೋ ಬಾರಿ ಫಲಿತಾಂಶ ಬಂದಿಲ್ಲ. ಸಮೀಕ್ಷೆ ನಡೆಸುವವರು ಸುಮಾರು 20ರಿಂದ 30 ಸಾವಿರ ಜನರನ್ನು ಭೇಟಿ ಮಾಡಿರುತ್ತಾರೆ. ಉಳಿದವರು ಯಾರಿಗೆ ವೋಟ್ ಹಾಕಿದ್ದಾರೆ ಎಂದು ಗೊತ್ತಾಗುವುದಿಲ್ಲ. ಹೀಗಾಗಿ, ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಸಮೀಕ್ಷೆಗಳು ಸುಳ್ಳಾಗಲಿವೆ ಎಂದರು.
ನನ್ನ ಪ್ರಕಾರ ರಾಜ್ಯದಲ್ಲಿ ಕಾಂಗ್ರೆಸ್ 14 ಹಾಗೂ ಜೆಡಿಎಸ್ ಮೂರು ಸ್ಥಾನಗಳಲ್ಲಿ ಗೆಲುವು ಸಾಧಿಸುವ ನಿರೀಕ್ಷೆ ಇದೆ. ಇನ್ನು ಮೇ. 23 ರ ನಂತರ ರಾಜ್ಯ ಸಮ್ಮಿಶ್ರ ಸರ್ಕಾರ ಬೀಳುವುದಿಲ್ಲ. ಲೋಕಸಭಾ ಚುನಾವಣೆಯ ಫಲಿತಾಂಶ ರಾಜ್ಯ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅವರು ಸಿಎಂ ಆಗಬೇಕು ಎಂಬುದು ನನ್ನ ವೈಯಕ್ತಿಕ ಆಸೆಯಾಗಿದೆ. ಆದರೆ, ಪರಿಸ್ಥಿತಿ ಹಾಗಿಲ್ಲ. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಸಮ್ಮಿಶ್ರ ಸರ್ಕಾರದಲ್ಲಿ ಎರಡೂ ಪಕ್ಷಗಳ ಮುಖಂಡರ ವಯಕ್ತಿಕ ವಿಚಾರಗಳು ಇರುತ್ತವೆ. ಮುಖಂಡರ ಸಾವಿರಾರು ವಿಚಾರಗಳು ಇರುತ್ತವೆ. ಆದರೆ, ಸಮ್ಮಿಶ್ರ ಸರ್ಕಾರದಲ್ಲಿ ಅವುಗಳಿಗೆ ಅವಕಾಶವಿರುವುದಿಲ್ಲ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಹೇಳಿದರು.