ಕೊಪ್ಪಳ: ಕೊರೊನಾ ಸೋಂಕಿನ ಮೂರನೇ ಅಲೆ ಭೀತಿಯ ನಡುವೆ ಈಗ ಕೊಪ್ಪಳ ಜಿಲ್ಲೆಯ ಅನೇಕ ಜನರಲ್ಲಿ ನೆಗಡಿ, ಕೆಮ್ಮು, ಜ್ವರ ಕಾಣಿಸಿಕೊಂಡಿದ್ದು, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚಾಗಿದೆ.
ಜ್ವರ, ನೆಗಡಿ ಹಾಗೂ ಕೆಮ್ಮಿನಿಂದ ಬಳಲುತ್ತಿರುವ ಕೊಪ್ಪಳ ತಾಲೂಕಿನ ದೇವಲಾಪುರ ಗ್ರಾಮದ 20 ಜನರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಈ ಮೊದಲು ಸಣ್ಣ ಸಣ್ಣ ಮಕ್ಕಳಲ್ಲಿ ನ್ಯೂಮೊನಿಯಾದಂತಹ ಕಾಯಿಲೆಗಳು ಕಂಡು ಬಂದಿದ್ದು, ಈಗ ಮಕ್ಕಳ ಜೊತೆಗೆ ದೊಡ್ಡವರಲ್ಲಿಯೂ ಈ ಲಕ್ಷಣಗಳು ಕಂಡು ಬಂದಿದೆ. ವಾತಾವರಣ ಬದಲಾವಣೆಯಿಂದಾಗಿ ಜನರು ಹೀಗೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು, ಸೂಕ್ತ ಚಿಕಿತ್ಸೆಯಿಂದ ಗುಣಮುಖರಾಗುತ್ತಾರೆ. ಇದಕ್ಕಾಗಿ ತೀವ್ರ ಭಯ ಪಡುವ ಅಗತ್ಯವಿಲ್ಲ ಎನ್ನುತ್ತಾರೆ ವೈದ್ಯರು.
ಇದನ್ನೂ ಓದಿ: ನಿಫಾ ವೈರಸ್ ಶಂಕೆ.. ಸ್ವಇಚ್ಛೆಯಿಂದ ಬಂದು ಪರೀಕ್ಷೆ ಮಾಡಿಸಿಕೊಂಡ ವ್ಯಕ್ತಿ
ಜಿಲ್ಲೆಯಲ್ಲಿ ಈಗ ಪ್ರತಿದಿನ ಸುಮಾರು 2000 ರಿಂದ 2500 ಜನರ, ಈ ಪೈಕಿ ಶೇ.10ರಷ್ಟು ಮಕ್ಕಳ ಗಂಟಲ ದ್ರವ ಪರೀಕ್ಷೆ ಮಾಡಲಾಗುತ್ತಿದೆ. ಸಮಾಧಾನಕರ ಸಂಗತಿ ಎಂದರೆ ಅವರಲ್ಲಿ ಕೋವಿಡ್ ಪಾಸಿಟಿವ್ ಕಂಡು ಬಂದಿದ್ದು ಅತ್ಯಂತ ಕಡಿಮೆ. ಈಗ ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇ. 0.07 ಕ್ಕಿಂತ ಕಡಿಮೆ ಇದೆ. ಹೀಗಾಗಿ ಯಾರೂ ಸಹ ಭಯಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಲಿಂಗರಾಜು ಹೇಳಿದ್ದಾರೆ.
ಮಳೆಗಾಲದ ಈ ದಿನಗಳಲ್ಲಿ ನೆಗಡಿ, ಕೆಮ್ಮು, ಜ್ವರ ಸಾಮಾನ್ಯ. ಆದರೆ, ಇವು ಸಹ ಕೊವಿಡ್ ಲಕ್ಷಣಗಳು ಆಗಿರುವುದರಿಂದ ಜನಸಾಮಾನ್ಯರು ಭಯಪಡುತ್ತಿದ್ದಾರೆ. ಆದರೆ, ಇಂತಹ ಲಕ್ಷಣಗಳು ಕಂಡು ಬಂದರೆ ಭಯಪಡದೇ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಬೇಕು. ಮಾಸ್ಕ್ ಹಾಕಿಕೊಳ್ಳುವುದು ಸೇರಿದಂತೆ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂದು ಡಿಹೆಚ್ಒ ಡಾ.ಲಿಂಗರಾಜು ಹೇಳಿದ್ದಾರೆ.