ಗಂಗಾವತಿ (ಕೊಪ್ಪಳ) : ತಾಲೂಕಿನ ಆನೆಗುಂದಿ ಬಳಿ ಇರುವ ನವವೃಂದಾವನದ ವಿವಾದ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಸಿದ್ಧ ಎಂದು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರು ಹೇಳಿದ್ದಾರೆ.
ನವವೃಂದಾವನದಲ್ಲಿ ಪದ್ಮನಾಭ ತೀರ್ಥರ ಆರಾಧನಾ ಪೂಜೆಯ ಬಳಿಕ ಮಾತನಾಡಿದ ಅವರು, ಇದು ದೀರ್ಘಾವಧಿಯ ವಿವಾದ. ಅನಿವಾರ್ಯ ಕಾರಣಕ್ಕೆ ನ್ಯಾಯಾಲಯಕ್ಕೆ ಹೋಗಿದೆ. ಈ ವಿವಾದ ಬಗೆಹರಿಸಿಕೊಳ್ಳಲು ನಾವು ಮೊದಲಿಗರು ಎಂದರು.
ಇನ್ನು ನವವೃಂದಾವನದಲ್ಲಿ ಮೂಲ ಸೌಲಭ್ಯ ಕಲ್ಪಿಸಲು ರಾಯರ ಮಠದಿಂದ ಕ್ರಮ ಕೈಗೊಳ್ಳಲಾಗುತ್ತದೆ. ನವವೃಂದಾವನವು ಈಗ ಸರ್ಕಾರದ ಸುಪರ್ದಿಯಲ್ಲಿದೆ. ಸರ್ಕಾರದ ಅನುಮತಿ ಪಡೆದು ಇನ್ನಷ್ಟು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.
ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ನಮಗೂ ಆಹ್ವಾನವಿದೆ. ಈ ಸಮಯದಲ್ಲಿ ಪೂರ್ವನಿಯೋಜಿತ ಕಾರ್ಯಕ್ರಮಗಳಿದ್ದು, ಬಿಡುವು ಮಾಡಿಕೊಂಡು ಭಾಗಿಯಾಗುತ್ತೇವೆ. ಹಿಂದು ಧರ್ಮಿಯರ ಆರಾಧ್ಯ ದೇವರು ಶ್ರೀರಾಮ. ಮಂತ್ರಾಲಯದಲ್ಲಿ ಪೂಜೆಗೊಳ್ಳುತ್ತಿರುವುದು ಮೂಲ ರಾಮದೇವರು.
ಶ್ರೀರಾಮನ ಜನ್ಮ ಸ್ಥಳ ಅಭಿವೃದ್ಧಿಯಾದಂತೆ ಅಂಜನಾದ್ರಿಯೂ ಅಭಿವೃದ್ಧಿಯಾಗಬೇಕು. ಪಕ್ಷಾತೀತವಾಗಿ ಅಂಜನಾದ್ರಿ ಅಭಿವೃದ್ಧಿಯ ಬಗ್ಗೆ ಧ್ವನಿ ಎತ್ತಿದ್ದಾರೆ. ಸನಾತನ ಧರ್ಮದ ಬಗ್ಗೆ ಯಾರು ಮಾತನಾಡಬಾರದು. ಸನಾತನ ಧರ್ಮದ ಬಗ್ಗೆ ಮಾತನಾಡಿದರೆ ಅದಕ್ಕೆ ತಕ್ಕ ಪಾಠ ಕಲಿಯಬೇಕಾಗುತ್ತದೆ. ಸನಾತನ ಧರ್ಮದ ಬಗ್ಗೆ ವಿಧರ್ಮಿಯರು ಹಾಗೂ ಸ್ವಧರ್ಮೀಯರು ಮಾತನಾಡಬಾರದು ಎಂದು ಮಂತ್ರಾಲಯದ ಶ್ರೀ ಸುಭುದೇಂದ್ರರು ಹೇಳಿದ್ದಾರೆ.
ಏನಿದು ಪ್ರಕರಣ : ಗಂಗಾವತಿ ತಾಲೂಕಿನ ಆನೆಗೊಂದಿ ಬಳಿಯ ತುಂಗಭದ್ರಾ ನದಿ ತಟದಲ್ಲಿರುವ ನವವೃಂದಾವನ ಗಡ್ಡೆಯಲ್ಲಿ ಮಾಧ್ವಮತ ಪ್ರಚಾರಕರ ಒಂಬತ್ತು ಯತಿಗಳ ಭೌತಿಕ ಸಮಾಧಿಗಳಿವೆ. ಈ ಪೈಕಿ ಒಂದು ಸಮಾಧಿ (ವೃಂದಾವನ) ವಿವಾದದ ಕೇಂದ್ರ ಬಿಂದುವಾಗಿದೆ. ರಾಯರಮಠದ ಅನುಯಾಯಿಗಳು ಅದನ್ನು ಜಯತೀರ್ಥರದ್ದು ಎಂದು, ಉತ್ತರಾಧಿ ಮಠದ ಅನುಯಾಯಿಗಳು ಅದೇ ವೃಂದಾವನವನ್ನು ರಘುವರ್ಯ ತೀರ್ಥರದ್ದು ಎಂದು ವಾದಿಸುತ್ತಿರುವುದು ವಿವಾದಕ್ಕೀಡಾಗಿತ್ತು.
ನ್ಯಾಯಾಲಯದ ಮಟ್ಟಿಲೇರಿದ ಪ್ರಕರಣ : ರಘುವರ್ಯ ತೀರ್ಥರ ವೃಂದಾವನವನ್ನು ರಾಯರ ಮಠದವರು, ಜಯತೀರ್ಥರದ್ದು ಎಂದು ವಾದಿಸುತ್ತಿದ್ದು ಮತ್ತು ಅದಕ್ಕೆ ಧಾರ್ಮಿಕ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಯತಿ ಪರಂಪರೆಗೆ ಅಪಚಾರ ಮಾಡುತ್ತಿದ್ದಾರೆ. ಇದಕ್ಕೆ ತಡೆ ನೀಡುವಂತೆ ಕೋರಿ ಈ ಸಂಬಂಧ ಉತ್ತರಾಧಿ ಮಠದ ಅನುಯಾಯಿಗಳು ಧಾರವಾಡದ ಹೈಕೋರ್ಟ್ ಪೀಠದಲ್ಲಿ ಮನವಿ ಸಲ್ಲಿಸಿದ್ದರು. ಮನವಿ ಪುರಸ್ಕರಿಸಿದ ಧಾರವಾಡ ಹೈಕೋರ್ಟ್ ಪೀಠದ ನ್ಯಾ. ಶಂಕರ್ ಮುಗುದುಮ್ ನೇತೃತ್ವದಲ್ಲಿನ ಏಕಸದಸ್ಯ ಪೀಠ, ಗಡ್ಡಿಯಲ್ಲಿನ ವಿವಾದಿತ ವೃಂದಾವನಕ್ಕೆ ಯಾವುದೇ ಪೂಜೆ-ಪುನಸ್ಕಾರ ಮಾಡದಂತೆ ರಾಯರ ಮಠದ ಅನುಯಾಯಿಗಳಿಗೆ ನಿರ್ಬಂಧ ಹೇರಿ ಸೆ.11ರಂದು ಆದೇಶ ಜಾರಿ ಮಾಡಿದ್ದರು.
ಇದನ್ನೂ ಓದಿ: ನವವೃಂದಾವನ ಗಡ್ಡೆ ವಿವಾದ: ಏಕಸದಸ್ಯ ಪೀಠದ ತೀರ್ಪನ್ನು ತಳ್ಳಿಹಾಕಿದ ಹೈಕೋರ್ಟ್ ದ್ವಿಸದಸ್ಯ ಪೀಠ