ಗಂಗಾವತಿ : ಹೊಟ್ಟೆ ಪಾಡಿಗಾಗಿ ರಾಯಚೂರು ಜಿಲ್ಲೆಯ ಮಾನ್ವಿಯಿಂದ ದುಡಿಯಲು ಬಂದಿದ್ದ ದಲಿತ ಮಹಿಳೆಯೊಬ್ಬಳ ಮೇಲೆ ಭೂ ಮಾಲೀಕನೊಬ್ಬ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಗಂಗಾವತಿ ಗ್ರಾಮೀಣ ಠಾಣಾ ವ್ಯಾಪ್ತಿಯ ಶ್ರೀರಾಮನಗರದಲ್ಲಿ ನಡೆದಿದೆ.
ತಾನು ಬಹಿರ್ದೆಸೆಗೆ ಹೋದಾಗ ಹಿಂಬಾಲಿಸಿಕೊಂಡು ಬಂದು ಮಾನಭಂಗಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಿ ಗ್ರಾಮದ ಭೂ ಮಾಲೀಕ ದುರ್ಗಾರಾವ್ ನಾಗೇಶ್ವರ ಎಂಬ ವ್ಯಕ್ತಿಯ ಮೇಲೆ ಸಂತ್ರಸ್ತ ಮಹಿಳೆಯು ದೂರು ದಾಖಲಿಸಿದ್ದಾರೆ.
ಘಟನೆಯ ವಿವರ : ಮಾನ್ವಿ ತಾಲೂಕಿಗೆ ಸೇರಿದ ಸಂತಸ್ತೆಯ ಕುಟುಂಬ ಕಳೆದ ಹತ್ತು ವರ್ಷದ ಹಿಂದೆ ಕೆಲಸವನ್ನರಸಿ ಶ್ರೀರಾಮನಗರಕ್ಕೆ ಬಂದಿದ್ದು, ದಲಿತ ಸಮುದಾಯದವರೇ ಹೆಚ್ಚಾಗಿ ವಾಸಿಸುವ ಗುಂತಕಲ್ ಕ್ಯಾಂಪಿನಲ್ಲಿ ವಾಸ ಮಾಡುತ್ತಿತ್ತು. ಹೊಲ, ಮನೆಯ ಕೆಲಸ ಮಾಡಿಕೊಂಡು ಇದ್ದ ತನಗೆ ಕಳೆದ ಹಲವು ತಿಂಗಳಿಂದ ಇಂದಿರಾ ಕ್ಯಾಂಪಿನ ದುರ್ಗಾರಾವ್ ಎಂಬ ವ್ಯಕ್ತಿ ಚುಡಾಯಿಸುತ್ತ ಹಿಂಬಾಲಿಸುತ್ತಿದ್ದ.
ಬುದ್ಧಿ ಬಂದು ಸರಿಯಾಗಬಹುದು ಎಂದು ಭಾವಿಸಿದ್ದೆ. ಆದರೆ, ಜೂನ್ 26ರಂದು ಗ್ರಾಮದ ಬಸಯ್ಯ ಎಂಬುವರ ಪಾಳು ಜಮೀನಿನಲ್ಲಿ ಸಂಜೆ ಬಹಿರ್ದೆಸೆಗೆ ಹೋದಾಗ ನನ್ನನ್ನು ಹಿಂಬಾಲಿಸಿಕೊಂಡು ಬಂದ ಆರೋಪಿ ಸೀರೆ ಎಳೆದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆಂದು ದೂರು ಸಲ್ಲಿಸಿದ್ದಾರೆ.
ಇದನ್ನೂ ಓದಿ: ತುಮಕೂರು ಬಳಿ ಅಕ್ರಮವಾಗಿ ಸಾಗಿಸುತ್ತಿದ್ದ 9 ಒಂಟೆಗಳು ವಶ
ಈ ಸಂದರ್ಭದಲ್ಲಿ ನಾನು ಕೂಗಾಡಿದ್ದರಿಂದ ದಾರಿಯಲ್ಲಿ ಹೋಗುತ್ತಿದ್ದ ಹನುಮೇಶ್ ಮತ್ತು ಹನುಮಂತ್ ಅರಿಕೇರಿ ಎಂಬ ವ್ಯಕ್ತಿಗಳು ಬಂದು ನನ್ನನ್ನು ಕಾಪಾಡಿದ್ದಾರೆ. ಕೂಡಲೇ ಆರೋಪಿ ಮೇಲೆ ಕ್ರಮ ಕೈಗೊಳ್ಳುವಂತೆ ಸಂತ್ರಸ್ತೆ ದೂರು ನೀಡಿದ್ದಾರೆ.