ಕುಷ್ಟಗಿ/ಕೊಪ್ಪಳ: ಪತ್ನಿ ಕಿರುಕುಳದಿಂದ ಬೇಸತ್ತು ವ್ಯಕ್ತಿಯೊಬ್ಬ ತಾಲೂಕು ಸರ್ಕಾರಿ ಆಸ್ಪತ್ರೆ ಮೇಲಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಪ್ರಸಂಗ ನಡೆದಿದೆ.
ತಾಲೂಕಿನ ಚಳಗೇರಾ ಗ್ರಾಮದ ಅಂಬಾಜಿರಾವ್ ಜವಳೇಕರ್ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ. ಈ ವ್ಯಕ್ತಿ ಏಕಾಏಕಿ ಆಸ್ಪತ್ರೆಯ ಹೊಸ ಕ್ವಾಟ್ರಸ್ ಮೇಲೆ ಹತ್ತಿ ಕಿಟಕಿಯ ಮೇಲ್ಛಾವಣಿಯ ಮೇಲೆ ಕುಳಿತು ಅಲ್ಲಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳವುದಾಗಿ ಹೆದರಿಸಿದ್ದ. ಘಟನೆಯಿಂದ ಗಾಬರಿಯಾದ ಆಸ್ಪತ್ರೆ ಸಿಬ್ಬಂದಿ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದರು. ಕೂಡಲೇ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ, ಆತನ ಮನವೊಲಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ.
ಮಾಧ್ಯಮದವರ ಬಳಿ ಹೇಳುವುದಿದೆ, ನನ್ನನ್ನು ಕೋರ್ಟ್ಗೆ ಕರೆದೊಯ್ಯದಿದ್ದರೆ ನನ್ನ ಸಾವಿಗೆ ಆಸ್ಪತ್ರೆ ಸಿಬ್ಬಂದಿ ಹಾಗೂ ಪೊಲೀಸರು ಕಾರಣವಾಗುತ್ತಾರೆ. ನನ್ನ ವಿಡಿಯೋ ಮಾಡಿ ಜಾಲತಾಣಗಳಲ್ಲಿ ಹರಿಬಿಡಿ ಜಗತ್ತಿಗೆ ಗೊತ್ತಾಗಲಿ ಎಂದಿದ್ದಾನೆ. ನಿನ್ನ ಸಮಸ್ಯೆಗೆ ಸ್ಪಂದಿಸುವುದಾಗಿ ಮಾತನಾಡಿಸುತ್ತಲೇ ಏಣಿ ಬಳಸಿ ವ್ಯಕ್ತಿಯನ್ನು ರಕ್ಷಿಸಲಾಗಿದೆ.