ಕುಷ್ಟಗಿ (ಕೊಪ್ಪಳ): ತಾಲೂಕಿನ ಹಿರೇಮನ್ನಾಪುರ ಗ್ರಾಮದಲ್ಲಿ 2019-20ನೇ ಸಾಲಿನ 2 ಕೋಟಿ ಅನುದಾನದ ವೆಚ್ಚದಲ್ಲಿ ವಿಶೇಷ ಘಟಕದ ಯೋಜನೆಯಡಿ ನಿರ್ಮಾಣ ಹಂತದ ಚೆಕ್ ಡ್ಯಾಂ ಅನ್ನು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಪರಿಶೀಲಿಸಿದರು.
ಇದೇ ವೇಳೆ ಮಾತನಾಡಿದ ಅವರು, ಹುಲಿಯಾಪೂರ್ ತಾಂಡದಲ್ಲಿ ವಿಶೇಷ ಘಟಕದ ಯೋಜನೆಯಡಿ 2 ಕೋಟಿ ರೂಪಾಯಿ ಅನುದಾನದಲ್ಲಿ ಚೆಕ್ ಡ್ಯಾಂ ನಿರ್ಮಾಣ ಹಾಗೂ ಹಂಚಿನಾಳ ಗ್ರಾಮದಲ್ಲಿ 2019-20ನೇ ಸಾಲಿನ ಗಿರಿಜನ ಉಪಯೋಜನೆ(ಟಿ.ಎಸ್.ಪಿ) ಅಡಿಯಲ್ಲಿ ಚೆಕ್ ಡ್ಯಾಂ ನಿರ್ಮಾಣ ಮಾಡಲು ಎರಡು ಕೋಟಿ ರೂ. ಬಿಡುಗಡೆಯಾಗಿದೆ ಎಂದರು.
ಗುತ್ತಿಗೆದಾರರು ಕ್ರಿಯಾ ಯೋಜನೆಯಲ್ಲಿ ಇರುವಂತಹ ನಿಯಮಗಳ ಪ್ರಕಾರವೇ ಕಾಮಗಾರಿಯನ್ನು ಮಾಡಿ ಮುಗಿಸಬೇಕು. ಆದರೆ ಯಾವುದೇ ಕಾರಣಕ್ಕೂ ನಿಯಮವನ್ನು ಮೀರದೆ ಗುಣಮಟ್ಟ ಕಾಯ್ದುಕೊಳ್ಳುವುದರ ಮೂಲಕ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಗುತ್ತಿಗೆದಾರರು ಮುತುವರ್ಜಿ ವಹಿಸಬೇಕು ಎಂದು ಸೂಚಿಸಿದರು.
ಸಣ್ಣ ನೀರಾವರಿ ಇಲಾಖೆ ವತಿಯಿಂದ ಕೈಗೆತ್ತಿಕೊಳ್ಳಲಾದ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ವಾರದಲ್ಲಿ ಮೂರು ಬಾರಿ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಬೇಕು. ಗುತ್ತಿಗೆದಾರರು ಕಳಪೆ ಮಟ್ಟದ ಕಾಮಗಾರಿಯನ್ನು ನಿರ್ವಹಿಸುತ್ತಿದ್ದಾರೆ ಅಂತಹವರಿಗೆ ಇಲಾಖೆಯ ನಿಯಮಾವಳಿ ಪ್ರಕಾರ ಮಾಹಿತಿ ನೀಡಿ ಗುಣಮಟ್ಟ ಕಾಯ್ದುಕೊಂಡು ಹೋಗುವಂತೆ ಸಲಹೆ ನೀಡಬೇಕು ಎಂದು ಸಣ್ಣ ನೀರಾವರಿ ಇಲಾಖೆಯ ಎಇಇ ಎನ್.ಡಿ. ರಘುನಂದನ್ ಅವರಿಗೆ ಸೂಚಿಸಿದರು.
ಈ ಸಮಯದಲ್ಲಿ ಜೆಇ ರಾಜಶೇಖರ್ ಕಟ್ಟಿಮನಿ, ಗುತ್ತಿಗೆದಾರ ದೊಡ್ಡಬನಗೌಡ ಉಪಸ್ಥಿತರಿದ್ದರು.