ಕೊಪ್ಪಳ: ಬಿಜೆಪಿಗರು ಬಸ್ ನಿಲ್ದಾಣದಲ್ಲಿ ಕುಳಿತು ಜೋತಿಷ್ಯ ಹೇಳುವ ಕೆಲಸ ಮಾಡಲಿ. ನಮ್ಮ ಸರ್ಕಾರ ಐದು ವರ್ಷ ಅಧಿಕಾರ ಪೂರೈಸುವುದರಲ್ಲಿ ಸಂದೇಹವಿಲ್ಲ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಬಳಿಕ ರಾಜ್ಯ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿ, ಮೊದಲು ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಯಾಕೆ 67 ಸ್ಥಾನಕ್ಕಿಳಿಯಿತು ಎಂಬ ಬಗ್ಗೆ ಅವರು ಉತ್ತರಿಸಲಿ. ಅವರು ಹೀಗೆ ಮಾತನಾಡುತ್ತ ಹೋದರೆ 67 ಸೀಟು ಇದ್ದದ್ದು 37 ಸ್ಥಾನಕ್ಕೆ ಇಳಿಯಲಿದೆ. ಐದು ವರ್ಷಗಳ ಕಾಲ ನಮ್ಮ ಸರ್ಕಾರ ಅಧಿಕಾರದಲ್ಲಿ ಇರಲಿದೆ. ನನ್ನ ಕನಸು ಕೂಡ ಈಡೇರಲಿದೆ. ಕಾಂಗ್ರೆಸ್ ಸರ್ಕಾರದ ಭಾಗ್ಯಗಳು ಇರಲಿವೆ. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಕೆಲಸಗಳನ್ನೂ ಇದೇ ಸರ್ಕಾರ ಮಾಡಲಿದೆ ಎಂದು ಹೇಳಿದರು.
ಶಿಕ್ಷಕರ ನೇಮಕಾತಿ ಗೊಂದಲ ಪರಹಾರದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಸಿ, ಶಿಕ್ಷಕರ ನೇಮಕಾತಿ ಪ್ರಕರಣ ನ್ಯಾಯಾಲಯದಲ್ಲಿದೆ. ಇತ್ತೀಚೆಗೆ ಆದೇಶ ಬಂದ ನಂತರ ಕಲ್ಯಾಣ ಕರ್ನಾಟಕ ಜಿಲ್ಲೆಗಳನ್ನು ಹೊರತುಪಡಿಸಿ ಬಾಕಿ ಜಿಲ್ಲೆಗಳ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲಾಗುತ್ತಿದೆ. ನಮಗೆ ನ್ಯಾಯಾಂಗ ಪ್ರಶ್ನಿಸುವ ಅಧಿಕಾರವಿಲ್ಲ. ಆದರೆ, ಸರ್ಕಾರ ಈ ಭಾಗದ ಅಭ್ಯರ್ಥಿಗಳ ಪರವಾಗಿದೆ. ಕಾನೂನು ತೊಡಕುಗಳನ್ನು ಸರಿಪಡಿಸಿಕೊಂಡು ಆದೇಶ ಕೊಡಲಾಗುವುದು. ಕಲ್ಯಾಣ ಕರ್ನಾಟಕ ಭಾಗದ 4 ಸಾವಿರ ಅಭ್ಯರ್ಥಿಗಳಿಗೆ ಖಂಡಿತವಾಗಿ ನೇಮಕಾತಿ ಮಾಡಿಕೊಳ್ಳುತ್ತೇವೆ. ಶಿಕ್ಷಕರ ನೇಮಕಾತಿಯಲ್ಲಿನ ಗೊಂದಲಗಳನ್ನು ಶೀಘ್ರ ಪರಿಹಾರ ಮಾಡಲಾಗುವುದು. ನಮ್ಮ ಸರಕಾರದ ಮೇಲೆ ನೀವು ಭರವಸೆಯನ್ನು ಇಡಿ ಎಂದರು.
20 ಸಾವಿರ ಶಿಕ್ಷಕರ ನೇಮಕಕ್ಕೆ ಕ್ರಮ: ಸದ್ಯ ರಾಜ್ಯಾದ್ಯಂತ 40 ಸಾವಿರ ಶಿಕ್ಷಕರ ಕೊರತೆ ಇದೆ. ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ. ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ಮುಂದಿನ ವರ್ಷ 20 ಸಾವಿರ ಶಿಕ್ಷಕರ ನೇಮಕಕ್ಕೆ ಕ್ರಮವಹಿಸಲಾಗುವುದು. ಇದರಲ್ಲಿ ವಿಷಯವಾರು ಶಿಕ್ಷಕರೊಂದಿಗೆ ದೈಹಿಕ ಶಿಕ್ಷಕರ ನೇಮಕಕ್ಕೂ ಚಿಂತನೆ ನಡೆಸಿದ್ದೇವೆ ಎಂದು ಹೇಳಿದರು.
ಬಳಿಕ ಸತೀಶ್ ಜಾರಕಿಹೊಳಿ ಮುನಿಸಿಕೊಂಡಿದ್ದಾರೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ, ನಮ್ಮ ಪಕ್ಷದಲ್ಲಿ ಯಾರೊಬ್ಬರದು ತೊಂದರೆ ಇಲ್ಲ. ಎಲ್ಲರೂ ಕೂಡಿ ಇದ್ದಿವಿ. ನಮಗೂ ಜವಬ್ದಾರಿ ಇದೆ ನಾವು ಸರಿ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ: ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಏಕರೂಪದ ಕ್ಯಾಲೆಂಡರ್ ಈವೆಂಟ್ ಜಾರಿಗೆ ಸಿಎಂ ಸೂಚನೆ