ಕೊಪ್ಪಳ : ನಗರದಲ್ಲಿ ಹುಚ್ಚುನಾಯಿ ಕಡಿತದಿಂದ ಸುಮಾರು 15 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕುವೆಂಪು ನಗರ, ವಡ್ಡರ ಓಣಿ, ಹಮಾಲರ ಕಾಲೋನಿ ಸೇರಿದಂತೆ ಅನೇಕ ಕಡೆ ಒಂದೇ ಹುಚ್ಚು ನಾಯಿ ಜನರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ.
ಯಶವಂತ (5), ಲಕ್ಷ್ಮಣ, ಗಂಗಮ್ಮ, ಲಕ್ಷ್ಮಣ ಇಂದ್ರಮ್ಮನವರ್, ಚಂದ್ರು ಸೇರಿದಂತೆ ಸುಮಾರು 15 ಕ್ಕೂ ಹೆಚ್ಚು ಜನರ ಮೇಲೆ ಹುಚ್ಚು ನಾಯಿ ದಾಳಿ ಮಾಡಿ ಮುಖ, ಕೈ, ಕಾಲುಗಳಿಗೆ ಕಡಿದು ಗಾಯಗೊಳಿಸಿದೆ. ತಾಲೂಕಿನ ಹೂವಿನಾಳದಲ್ಲಿ ಇದೇ ನಾಯಿ ಬೆಳಗ್ಗೆ ಕೆಲವರನ್ನು ಕಡಿದು ಗಾಯಗೊಳಿಸಿತ್ತು. ಅಲ್ಲಿಂದ ಕೊಪ್ಪಳದ ಕುವೆಂಪುನಗರ, ವಡ್ಡರ ಓಣಿ, ಹಮಾಲರ ಕಾಲೋನಿಯಲ್ಲಿಯೂ ಜನರ ಮೇಲೆ ದಾಳಿ ಮಾಡಿದೆ.
ವಡ್ಡರ ಓಣಿಯಲ್ಲಿ ಮನೆಯ ಮುಂದೆ ಆಟವಾಡುತ್ತಿದ್ದ ಐದು ವರ್ಷದ ಯಶವಂತ ಎಂಬ ಬಾಲಕನ ಮೇಲೆ ದಾಳಿ ಮಾಡಿದೆ. ಈ ಸಂದರ್ಭದಲ್ಲಿ ಹುಲುಗಪ್ಪ ಎಂಬ ವ್ಯಕ್ತಿ ನಾಯಿಯಿಂದ ಮಗುವನ್ನು ರಕ್ಷಣೆ ಮಾಡಿದ್ದಾರೆ. ಚಂದ್ರು ಎಂಬುವವರ ಕಣ್ಣಿಗೆ ನಾಯಿ ಕಡಿದು ತೀವ್ರ ಗಾಯಗೊಳಿಸಿದೆ. ಗಾಯಾಳುಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ನಾಯಿ ದಾಳಿಯಿಂದ ಜನರು ಭೀತಿಗೊಂಡಿದ್ದಾರೆ.