ಕೊಪ್ಪಳ : ನಂದಕಿಶೋರ್ ನಿರ್ದೇಶನದಲ್ಲಿ ಬರ್ತಿರುವ ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ಅಭಿನಯದ ರಾಣಾ ಚಿತ್ರದ ಲಿರಿಕಲ್ ವಿಡಿಯೋ ಸಾಂಗ್ ಅನ್ನು ಇಂದು ಹುಲಗಿ ಗ್ರಾಮದ ಶ್ರೀ ಹುಲಿಗೆಮ್ಮದೇವಿ ಸನ್ನಿಧಾನದಲ್ಲಿ ಬಿಡುಗಡೆ ಮಾಡಲಾಯ್ತು.
ಉಧೋ ಉಧೋ ಹುಲಿಗೆಮ್ಮ ಎಂಬ ಲಿರಿಕಲ್ ವಿಡಿಯೋ ಸಾಂಗ್ ಅನ್ನು ಹುಲಿಗೆಮ್ಮನ ಸನ್ನಿಧಾನದಲ್ಲಿಯೇ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿತ್ತು. ಅದರಂತೆ ಇಂದು ಕೆ.ಮಂಜು, ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ಚಿತ್ರದ ನಾಯಕ ನಟ ಶ್ರೇಯಸ್, ನಿರ್ದೇಶಕ ನಂದಕಿಶೋರ್ ಶ್ರೀ ಹುಲಿಗೆಮ್ಮದೇವಿ ದರ್ಶನ ಪಡೆದರು. ನಂತರ ಧ್ರುವ ಸರ್ಜಾ ವಿಡಿಯೋ ಸಾಂಗ್ ಬಿಡುಗಡೆ ಮಾಡಿದರು.
ತಮ್ಮ ನೆಚ್ಚಿನ ನಾಯಕ, ನಟನನ್ನು ನೋಡಲು ಬಂದ ಅಭಿಮಾನಿಗಳಿಗೆ ಪೊಲೀಸರು ಲಾಠಿ ರುಚಿ ಕೂಡ ತೋರಿಸಿದರು. ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆ ಮಾಡುವ ಮುನ್ನ ಇತ್ತೀಚಿಗೆ ಅಗಲಿದ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಆತ್ಮಕ್ಕೆ ಶಾಂತಿಕೋರಿ ಚಿತ್ರತಂಡ ಮೌನಾಚಾರಣೆ ಮೂಲಕ ನಮನ ಸಲ್ಲಿಸಿತು.