ಕೊಪ್ಪಳ: ಕೊರೊನಾ ಭೀತಿಯ ಕರಿ ನೆರಳು ಎಲ್ಲಾ ಕ್ಷೇತ್ರದ ವ್ಯಾಪಿಸಿದೆ. ಜಿಲ್ಲೆಯಲ್ಲಿರುವ ಕಾರ್ಮಿಕರು ಹಾಗೂ ವಲಸೆ ಕಾರ್ಮಿಕರ ಪಾಡು ಹೇಳ ತೀರದಂತಾಗಿದೆ. ಕಾರ್ಮಿಕರನ್ನು ವಸತಿ ರಹಿತ ಹಾಗೂ ವಸತಿ ಸಹಿತ ವಲಸೆ ಕಾರ್ಮಿಕರು ಎಂದು ಗುರುತಿಸಲಾಗಿದೆ. ಉತ್ತರ ಪ್ರದೇಶ, ಬಿಹಾರ ಸೇರಿದಂತೆ ವಿವಿಧ ರಾಜ್ಯಗಳಿಂದ ಬಂದಿದ್ದ 120 ಕುಟುಂಬಗಳ ಕಾರ್ಮಿಕರನ್ನು ಗುರ್ತಿಸಲಾಗಿದೆ. ಇವರ ಸಂಖ್ಯೆ ಸರಿಸುಮಾರು 500ರಷ್ಟಿದ್ದು ಲಾಕ್ಡೌನ್ನಿಂದಾಗಿ ಅವರ ದುಡಿಮೆ ಖೋತಾ ಆಗಿದೆ. ಅವರನ್ನು ಗುರ್ತಿಸಿ ದವಸ, ಧಾನ್ಯ ನೀಡಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಈರಣ್ಣ ಆಶಾಪುರ ಸ್ಪಷ್ಟನೆ ನೀಡಿದ್ದಾರೆ.
ಬೇರೆ ಜಿಲ್ಲೆ ಹಾಗೂ ರಾಜ್ಯಗಳಲ್ಲಿ ಕೆಲಸ ಮಾಡುತ್ತಿದ್ದ ವಲಸೆ ಕಾರ್ಮಿಕರು ಲಾಕ್ ಡೌನ್ ಹಿನ್ನೆಲೆಯಲ್ಲಿ ತಮ್ಮೂರಿಗೆ ಕೊಪ್ಪಳ ಜಿಲ್ಲೆ ಮಾರ್ಗವಾಗಿ ತೆರಳುತ್ತಿದ್ದ 174 ಮಂದಿಯನ್ನು ಚೆಕ್ಪೋಸ್ಟ್ನಲ್ಲಿ ತಡೆಹಿಡಿಯಲಾಗಿದೆ. ಇವರಿಗೆ ಕೊಪ್ಪಳ ಹಾಗೂ ಕುಷ್ಟಗಿಯಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ. ಆರೋಗ್ಯ ತಪಾಸಣೆ, ಉಪಹಾರ, ಊಟ ಹಾಗೂ ವಸತಿಯನ್ನು ಒದಗಿಸಲಾಗಿದೆ. ಆದರೆ ಈ ವಲಸೆ ಕಾರ್ಮಿಕರು ತಮ್ಮೂರುಗಳನ್ನು ತಲುಪಲಾಗದೆ ಚಡಪಡಿಸುತ್ತಿದ್ದಾರೆ.