ಕೊಪ್ಪಳ: ಸಾಂಕ್ರಾಮಿಕ ರೋಗ ಕೋವಿಡ್ನಿಂದಾಗಿ ರಾಜ್ಯಾದ್ಯಂತ ಶಾಲೆಗಳು ಬಾಗಿಲು ಮುಚ್ಚಿದ್ದವು. ನಿಧಾನವಾಗಿ ಸೋಂಕಿನ ತೀವ್ರತೆ ಕಡಿಮೆಯಾಗುತ್ತಿದ್ದಂತೆ ಶಿಕ್ಷಣ ಇಲಾಖೆ ಹಂತ-ಹಂತವಾಗಿ ತರಗತಿಗಳನ್ನು ಆರಂಭಿಸುತ್ತಿದೆ. ಅದರಂತೆ ಇಂದಿನಿಂದ ರಾಜ್ಯಾದ್ಯಂತ ಇಂದಿನಿಂದ ಎಲ್ಕೆಜಿ, ಯುಕೆಜಿ ಹಾಗು ಅಂಗನವಾಡಿ ಪುನಾರಂಭ ಮಾಡಿವೆ. ಈ ಹಿನ್ನೆಲೆ ಕೊಪ್ಪಳ ನಗರ ಸೇರಿದಂತೆ ಹಲವು ಶಾಲೆಗಳಲ್ಲಿ ಮಕ್ಕಳನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಈವರೆಗೆ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದ ಮಕ್ಕಳು ಇಂದು ಶಾಲೆಗೆ ಬರುತ್ತಿದ್ದಾರೆ. ಶಾಲೆಗೆ ಬರಲು ಕೆಲವು ಚಿಕ್ಕ ಮಕ್ಕಳು ಹಠ ಮಾಡುತ್ತಿದ್ದು, ಅಳುತ್ತಿರುವ ಮಕ್ಕಳನ್ನು ಪಾಲಕರು ಶಾಲೆಗೆ ಕರೆ ತಂದು ಬಿಟ್ಟು ಹೋಗುತ್ತಿರುವ ದೃಶ್ಯಗಳು ಕಂಡುಬಂದವು.
ಶಾಲೆ ಇಲ್ಲದ ಕಾರಣ ಮಕ್ಕಳು ಮನೆಯಲ್ಲಿ ಗಲಾಟೆ ಮಾಡುತ್ತಿದ್ದರು. ಈಗ ಶಾಲೆಗಳು ಆರಂಭವಾಗಿರುವದರಿಂದ ಗಲಾಟೆ ಕಡಿಮೆಯಾಗಿ ವಿದ್ಯಾಭ್ಯಾಸದ ಕಡೆ ಗಮನ ಹರಿಸಲಿದ್ದಾರೆ. ಸದ್ಯ ಕೊರೊನಾ 3ನೇ ಅಲೆಯ ಭೀತಿ ಕಡಿಮೆಯಾಗಿದೆ. ಇದರಿಂದಾಗಿ ಶಾಲೆ ಮುಂದುವರಿಸಬೇಕೆಂದು ಪಾಲಕರು ಹೇಳಿದ್ದಾರೆ. ಶಾಲೆಗೆ ಬಂದರೆ ಸ್ನೇಹಿತರು ಸಿಗುತ್ತಾರೆ. ಅವರೊಂದಿಗೆ ಆಟವಾಡಬಹುದು. ಶಾಲೆಗೂ ಬರುತ್ತೇನೆ, ಮನೆಗೂ ಹೋಗುತ್ತೇನೆ ಎಂದು ಶಾಲೆಗೆ ಬಂದ ಕೆಲ ಪುಟಾಣಿಗಳು ಮುಗ್ದತೆಯಿಂದ ಹೇಳುತ್ತಿವೆ.
ಕೋವಿಡ್ ಮುಂಜಾಗ್ರತಾ ಕ್ರಮಗಳೊಂದಿಗೆ ಶಾಲೆ ನಡೆಸುತ್ತಿರುವುದಾಗಿ ಖಾಸಗಿ ಶಾಲಾ ಆಡಳಿತ ಮಂಡಳಿಯವರು ತಿಳಿಸಿದ್ದಾರೆ. ಶಾಲೆ ಮಕ್ಕಳು ಆಗಮಿಸುತ್ತಿದಂತೆ ಹೂವು ಹಾಕಿ ಸ್ವಾಗತಿಸಿದ್ದಾರೆ. ಮಕ್ಕಳಿಗೆ ಸ್ಯಾನಿಟೈಸರ್, ಮಾಸ್ಕ್ ಧರಿಸುವಂತೆ ತಿಳಿಸುತ್ತಿದ್ದಾರೆ. ಸದ್ಯ ಎಲ್ಲಾ ತರಗತಿಗಳು ಆರಂಭವಾಗಿದ್ದು, ಶಾಲೆಗಳಲ್ಲಿ ಮಕ್ಕಳ ಕಲರವ ಕೇಳಿ ಸಂತಸವಾಗುತ್ತಿದೆ ಎನ್ನುತ್ತಾರೆ ಶಿಕ್ಷಕರು.