ಗಂಗಾವತಿ : ಐತಿಹಾಸಿಕ, ಪೌರಾಣಿಕ ಹಿನ್ನೆಲೆಯುಳ್ಳ ರಾಮಾಯಣದ ಘಟನಾವಳಿಗಳಿಗೆ ಸಾಕ್ಷಿಯಾಗಿರುವ ಕೊಪ್ಪಳ ಜಿಲ್ಲೆಗೆ ಕಿಷ್ಕಿಂಧೆ ಎಂದು ಮರು ನಾಮಕರಣ ಮಾಡಲು ಒತ್ತಾಯಿಸಿ ನಗರಸಭಾ ಸದಸ್ಯ ಅಜೆಯ್ ಬಿಚ್ಚಾಲಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
ಎರಡು ದಿನಗಳ ಹಿಂದಷ್ಟೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದ ಇವರು, ಇದೀಗ ಪ್ರಧಾನಿಗೂ ಪತ್ರ ಬರೆದು ಕೊಪ್ಪಳ ಜಿಲ್ಲೆಗೆ ಕಿಷ್ಕಿಂಧೆ ಎಂದು ಮರು ನಾಮಕರಣ ಮಾಡುವುದರ ಅಗತ್ಯ, ಮಹತ್ವ ಹಾಗೂ ಔಚಿತ್ಯದ ಬಗ್ಗೆ ವಿವರಣೆ ನೀಡಿದ್ದಾರೆ.
ರಾಮಾಯಣದಲ್ಲಿ ಬರುವ ವಾಲಿಕಿಲ್ಲಾ, ವಾಲಿಭಂಡಾರ, ವಾಲಿಕಾಷ್ಠ, ತಾರಾ ಪರ್ವತ, ಅಂಜನಾದಿ ಋಷಿಮುಖ ಪರ್ವತ, ಚಿಂಚಲಕೋಟೆ, ಪಂಪಾಸರೋವರದಂತಹ ಐತಿಹಾಸಿಕ ಸ್ಥಳಗಳು ಜಿಲ್ಲೆಯಲ್ಲಿವೆ. ಹನುಮ ಜನಿಸಿದ ಸ್ಥಳ ಎಂದು ನಂಬುವ ಉತ್ತರ ಭಾರತದ ಬಹುತೇಕ ಜನರು ಪ್ರತಿ ವರ್ಷ ಸಾವಿರಾರು ಸಂಖ್ಯೆಯಲ್ಲಿ ಅಂಜನಾದ್ರಿಗೆ ಭೇಟಿ ನೀಡುತ್ತಾರೆ.
ಅಲ್ಲದೇ ಕೇಂದ್ರ ಸರ್ಕಾರ ರಾಮಾಯಣ ಸರ್ಕೀಟ್ ಯೋಜನೆಯಲ್ಲಿ ಅಂಜನಾದ್ರಿಯನ್ನು ಸೇರಿಸಿದೆ. ಜಿಲ್ಲೆಯ ಇತಿಹಾಸ ಅಮರವಾಗಿಡುವ ಭಾಗವಾಗಿ ಕೊಪ್ಪಳ ಜಿಲ್ಲೆಗೆ ಕಿಷ್ಕಿಂಧೆ ಜಿಲ್ಲೆ ಎಂದು ಮರು ನಾಮಕರಣ ಮಾಡುವುದು ಸೂಕ್ತ ಎಂದು ಪತ್ರದಲ್ಲಿ ವಿವರಣೆ ನೀಡಿದ್ದಾರೆ.