ಕೊಪ್ಪಳ: ರಾಜ್ಯದಲ್ಲಿ ಪತ್ರಕರ್ತರ ಮೇಲೆ ನಡೆಯುವ ಹಲ್ಲೆ ತಡೆಯಲು ಬಲವಾದ ಕಾನೂನು ರೂಪಿಸಬೇಕು ಎಂದು ಆಗ್ರಹಿಸಿ ಕೊಪ್ಪಳ ಮೀಡಿಯಾ ಕ್ಲಬ್ ವತಿಯಿಂದ ಪತ್ರ ಚಳುವಳಿ ನಡೆಸಲಾಯಿತು.
ರಾಜ್ಯದ ವಿವಿಧೆಡೆ ಪತ್ರಕರ್ತರ ಮೇಲೆ ನಡೆದ ಹಲ್ಲೆ ಖಂಡಿಸಿ ನಗರದ ಮೀಡಿಯಾ ಕ್ಲಬ್ ನಲ್ಲಿ ಖಂಡನಾ ಸಭೆ ನಡೆಸಲಾಯಿತು. ಬೆಂಗಳೂರಿನಲ್ಲಿ ಪತ್ರಕರ್ತರ ಮೇಲಾದ ಹಲ್ಲೆಯನ್ನು, ರಾಜ್ಯದ ವಿವಿಧೆಡೆ ಪತ್ರಕರ್ತರ ಮೇಲಾಗುತ್ತಿರುವ ಹಲ್ಲೆಯನ್ನು ಬಲವಾಗಿ ಖಂಡಿಸಿದರು.
ಅಲ್ಲದೇ ಪತ್ರಕರ್ತರ ಮೇಲೆ ನಡೆಯುವ ಹಲ್ಲೆ ತಡೆಗೆ ಬಲವಾದ ಕಾನೂನು ಜಾರಿ ಮಾಡುವಂತೆ ಸಿಎಂ ಅವರಿಗೆ ಒತ್ತಾಯಿಸಿ ಕೊಪ್ಪಳ ಮೀಡಿಯಾ ಕ್ಲಬ್ ಸದಸ್ಯರು ಪತ್ರ ಚಳವಳಿ ನಡೆಸಿದರು. ರಾಜ್ಯದ ಮುಖ್ಯಮಂತ್ರಿ ವಿಳಾಸಕ್ಕೆ ಪತ್ರ ಬರೆದ ಮೀಡಿಯಾ ಕ್ಲಬ್ ಸದಸ್ಯರು, ರಾಜ್ಯದಲ್ಲಿ ಪತ್ರಕರ್ತರ ಮೇಲೆ ಪದೇ-ಪದೆ ಒಂದಿಲ್ಲೊಂದು ತೆರನಾದ ಹಲ್ಲೆಗಳು ನಡೆಯುತ್ತಲೇ ಇವೆ. ಸಮಾಜದ ಅಂಕುಡೊಂಕು ತಿದ್ದುವ ಕೆಲಸ ಮಾಡುವ ಪತ್ರಕರ್ತರಿಗೆ ರಕ್ಷಣೆ ಇಲ್ಲವಾಗಿದೆ. ಹೀಗಾಗಿ ಪತ್ರಕರ್ತರು ಜೀವ ಭಯದಲ್ಲಿ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ವೈದ್ಯರ ಮೇಲೆ ನಡೆಯುವ ಹಲ್ಲೆ ತಡೆಗೆ ಇರುವ ಕಾಯ್ದೆ ವ್ಯಾಪ್ತಿಗೆ ಪತ್ರಕರ್ತರನ್ನು ಒಳಪಡಿಸಿ ಪತ್ರಕರ್ತರಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇನ್ನು ಪತ್ರಕರ್ತರಿಗೆ ವಿಶೇಷ ವಿಮೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ. ಬಳಿಕ ಬೆಂಗಳೂರಿನ ಕೆ.ಜಿ.ಹಳ್ಳಿಯಲ್ಲಿ ನಡೆದ ಗಲಾಟೆಯಲ್ಲಿ ತಪ್ಪಿತಸ್ಥರನ್ನು ತಕ್ಷಣ ಬಂಧಿಸಿ ಪ್ರಕರಣ ಕುರಿತು ತನಿಖೆ ನಡೆಸಬೇಕು ಎಂದು ಮೀಡಿಯಾ ಕ್ಲಬ್ ಸದಸ್ಯರು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದರು.