ಕೊಪ್ಪಳ: ಅಂಚೆ ಸೇವೆ ಈಗ ಕೇವಲ ಪತ್ರಗಳನ್ನು ತಲುಪಿಸುವ ಜಾಲವಾಗಿ ಮಾತ್ರ ಉಳಿದಿಲ್ಲ. ಕಾಲಕ್ಕೆ ತಕ್ಕಂತೆ ಅಂಚೆ ಇಲಾಖೆಯಲ್ಲಿಯೂ ಕೆಲ ಬದಲಾವಣೆಯಾಗಿದ್ದು, ಅಂಚೆ ಬ್ಯಾಂಕಿಂಗ್ ಮೂಲಕ ಗ್ರಾಹಕರ ಸ್ನೇಹಿ ಇಲಾಖೆಯಾಗಿ ಮಾರ್ಪಟ್ಟಿದೆ.
ಹೌದು, ಅಂಚೆ ಇಲಾಖೆಯಲ್ಲಿ ಅನೇಕ ಬದಲಾವಣೆಗಳನ್ನು ಮಾಡಲಾಗಿದ್ದು, ಗ್ರಾಹಕರ ಸೇವೆಯಲ್ಲಿ ನಿರಂತರವಾಗಿ ನಿರತವಾಗಿದೆ. ಬ್ಯಾಂಕಿಂಗ್ ವ್ಯವಸ್ಥೆಯನ್ನು ಸರಳವಾಗಿ ಅಳವಡಿಸಿಕೊಂಡು ತನ್ನ ಸೇವಾ ವಲಯವನ್ನು ವಿಸ್ತರಿಸಿಕೊಂಡಿದೆ. ಅಂಚೆ ಇಲಾಖೆಯಲ್ಲಿನ ಬ್ಯಾಂಕಿಂಗ್ ಯೋಜನೆಗಳು ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಸಾಕಷ್ಟು ಅನುಕೂಲಕರವಾಗಿರುವುದರಿಂದ ಜನರಿಗೆ ಹತ್ತಿರವಾಗುತ್ತಿದೆ. ಹೀಗಾಗಿ ಕೊಪ್ಪಳ ಜಿಲ್ಲೆಯ ಅಂಚೆ ಇಲಾಖೆಯಲ್ಲಿ ಸಹ ಲಕ್ಷಾಂತರ ಗ್ರಾಹಕರು ಖಾತೆ ತೆರೆದಿದ್ದಾರೆ.
ಕೊಪ್ಪಳ ಜಿಲ್ಲೆಯಾದ್ಯಂತ ಅಂಚೆ ಇಲಾಖೆಯ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ 3,38,286 ಮಂದಿ ಖಾತೆಗಳನ್ನು ಹೊಂದಿದ್ದಾರೆ. ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ 2.44 ಲಕ್ಷ ಖಾತೆಗಳಿದ್ದು, ಇದಲ್ಲದೆ ವಿವಿಧ ಪೆನ್ಷನ್ ಖಾತೆಗಳನ್ನು ಸಹ ತೆರೆಯಲಾಗಿದೆ. ಐದು ನೂರು ರೂಪಾಯಿ ಮಿನಿಮಮ್ ಬ್ಯಾಲೆನ್ಸ್ನೊಂದಿಗೆ ಎಸ್ಬಿ ಖಾತೆ ತೆರೆಯುವ ಯೋಜನೆ ಸಹ ಅಂಚೆ ಕಚೇರಿಯಲ್ಲಿದೆ.
ಬ್ಯಾಂಕುಗಳಿಗೆ ಹೋಲಿಸಿದರೆ ಅಂಚೆ ಇಲಾಖೆಯಲ್ಲಿ ಹಣ ಕಟ್ಟುವುದು ಅಥವಾ ಹಿಂತೆಗೆದುಕೊಳ್ಳುವುದು, ವ್ಯವಹರಿಸುವುದು ಸರಳವಾಗಿದೆ. ಜೊತೆಗೆ ಅಂಚೆ ಇಲಾಖೆಯ ಬ್ಯಾಂಕಿಂಗ್ ವ್ಯವಸ್ಥೆಯ ಅನೇಕ ಯೋಜನೆಗಳು ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಸಾಕಷ್ಟು ಅನುಕೂಲಕರವಾಗಿವೆ. ಹೀಗಾಗಿ ನಮ್ಮ ಅಂಚೆ ಇಲಾಖೆಯಲ್ಲಿಯೂ ಸಾಕಷ್ಟು ಜನರು ಖಾತೆಗಳನ್ನು ತೆರೆದಿದ್ದಾರೆ ಎಂದು ಕೊಪ್ಪಳದ ಬಜಾರ ಅಂಚೆ ಕಚೇರಿಯ ಅಧಿಕಾರಿ ಜಿ.ಎನ್.ಹಳ್ಳಿ ಹರ್ಷ ವ್ಯಕ್ತಪಡಿಸಿದ್ದಾರೆ.
ಇನ್ನು ಅಂಚೆ ಕಚೇರಿಯಲ್ಲಿ ಖಾತೆ ತೆರೆದರೆ ವ್ಯವಹರಿಸುವುದು ಸರಳ. ನಮಗೆ ಅಂಚೆ ಕಚೇರಿಯಿಂದ ಸಾಕಷ್ಟು ಅನುಕೂಲವಾಗಿದೆ ಎಂದು ಗ್ರಾಹಕರಾದ ತಿಪ್ಪಣ್ಣ ಹೇಳಿದ್ದಾರೆ.