ಕುಷ್ಟಗಿ (ಕೊಪ್ಪಳ): ತಾಲೂಕಿನ ಗುಮಗೇರಾ ಸೀಮಾದಲ್ಲಿ ರೆಸ್ ಪವರ್ ಇನ್ಫಾ ಪ್ರೈವೈಟ್ ಲಿಮಿಟೆಡ್ ಕಂಪನಿ ಸೋಲಾರ್ ಪವರ್ ಗ್ರೀಡ್ನಲ್ಲಿ ಸೇವಾ ಭದ್ರತೆ ಇಲ್ಲದೇ ಕೆಲಸಕ್ಕೆ ಬಳಸಿಕೊಳ್ಳುವುದನ್ನು ವಿರೋಧಿಸಿ ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ.
ಪಯನೀಯರ್ ಸೆಲ್ಸೂಷನ್ ಸೆಕ್ಯೂರಿಟಿ ಏಜೆನ್ಸಿಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಕಾರರು, ಸ್ಥಳಿಯ ಭದ್ರತಾ ಸಿಬ್ಬಂದಿ, ಮೇಲ್ವಿಚಾರಕರು ಹಾಗೂ ಕಾರ್ಮಿಕರು ಸೇರಿದಂತೆ 46 ಜನ ಕೆಲಸ ಮಾಡುತ್ತಿದ್ದಾರೆ. ಯಾವುದೇ ಪಿಎಫ್, ಇಎಸ್ಐ. ಕನಿಷ್ಟ ಸೇವಾ ಪಿಂಚಣಿ ಸೌಕರ್ಯಗಳಿಲ್ಲ. ಸರ್ಕಾರದ ನಿಯಮಾವಳಿ ಪ್ರಕಾರ ಗರಿಷ್ಠ 8 ತಾಸು ಬದಲಿಗೆ ವಿಶ್ರಾಂತಿ ರಹಿತವಾಗಿ 12 ತಾಸು ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಕಳೆದೆರೆಡು ವರ್ಷಗಳಿಂದ ಹರಿಯರ್ಸ್, ವೇತನ ಹೆಚ್ಚಳ, ಬೋನಸ್ ಮೊದಲಾದ ಹೊರಗುತ್ತಿಗೆ ಸೇವಾ ಸವಲತ್ತುಗಳಿಂದ ಹೊರತಾಗಿದೆ. ಪ್ರಶ್ನಿಸಿದರೆ ಕೆಲಸದಿಂದ ವಜಾ ಮಾಡುತ್ತಿದ್ದಾರೆ ಎಂದು ಭದ್ರತಾ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿರುವ ಮಾಜಿ ಸೈನಿಕ ಬಸನಗೌಡ ಆರೋಪಿಸಿದರು.
ಕುಷ್ಟಗಿಯ ಪ್ರವಾಸಿ ಮಂದಿರದಲ್ಲಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಸಮ್ಮುಖದಲ್ಲಿ ಸೇವಾ ಭದ್ರತಾ ಸವಲತ್ತು ಕಲ್ಪಿಸುವ ಕುರಿತು ಲಿಖಿತ ಭರವಸೆ ನೀಡಿದ್ದರು. ಆದರೆ ಒಂದೂವರೆ ತಿಂಗಳಾದರೂ ಸಂಬಂಧವೇ ಇಲ್ಲವೇನೋ ಎನ್ನುವಂತೆ ವರ್ತಿಸುತ್ತಿದ್ದಾರೆ ಗಂಭೀರವಾಗಿ ಆರೋಪಿಸಿದ್ದಾರೆ.