ಕುಷ್ಟಗಿ (ಕೊಪ್ಪಳ): ಹೈದರಾಬಾದ ನಿಜಾಮ್ ಕಾಲದ ಸ್ವಾತಂತ್ರ್ಯ ಪೂರ್ವ ಪಾರಂಪರಿಕ ಕಟ್ಟಡದಲ್ಲಿರುವ ನಗರ ಪೊಲೀಸ ಠಾಣಾ ಕಟ್ಟಡವನ್ನು ಅಭಿವೃದ್ಧಿಯ ನೆಪದಲ್ಲಿ ನೆಲಸಮಗೊಳಿಸದೇ ಸ್ಮಾರಕವಾಗಿ ಉಳಿಸಲು ಪುರಸಭೆ ಸದಸ್ಯ ಕಲ್ಲೇಶ ತಾಳದ್ ಒತ್ತಾಯಿಸಿದರು.
ನಗರದ ತಾ.ಪಂ. ಸಭಾಂಗಣದಲ್ಲಿ ನಡೆದ ಪುರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಐತಿಹಾಸಿಕ ಸ್ಮಾರಕಗಳು ಹೆಗ್ಗುರುತುಗಳಲ್ಲಿ ಕುಷ್ಟಗಿಯ ತಹಶೀಲ್ದಾರರ ಹಳೆ ಕಚೇರಿ, ಹಳೆ ಪ್ರವಾಸಿ ಮಂದಿರ, ಹಳೆ ಕೋರ್ಟ, ಕುಷ್ಟಗಿ, ಹನುಮಸಾಗರ, ತಾವರಗೇರಾ ಪೊಲೀಸ್ ಠಾಣೆಗಳು ಇವೆಲ್ಲವುಗಳನ್ನು ನಿಜಾಮ ಕಾಲದ ಕಟ್ಟಡಗಳೆಂದು ಅವುಗಳಿಗೆ ಧಕ್ಕೆ ಮಾಡದೇ ಉಳಿಸಲಾಗಿದೆ.
ಆದರೆ ಕುಷ್ಟಗಿ ಪೊಲೀಸ್ ಠಾಣೆ ನೆಲಸಮ ಮಾಡುತ್ತಿರುವುದು ಎಷ್ಟ ಸರಿ. ಈ ಕಟ್ಟಡ ಪಾರಂಪರಿಕ ಇತಿಹಾಸದ ಕೊಂಡಿಯಾಗಿದ್ದು, ಭಾವನಾತ್ಮಕ ಸಂಬಂಧವಿದೆ. ಪೊಲೀಸ್ ಠಾಣೆ ಮಾತ್ರವಲ್ಲದೇ ಪಟ್ಟಣದ ವ್ಯಾಪ್ತಿಯ ಎಲ್ಲ ಐಸಿಹಾಸಿಕ ಸ್ಮಾರಕಗಳನ್ನು ಉಳಿಸಬೇಕು ಎಂದು ಒತ್ತಾಯಿಸಿದರು.
ಹಳೆ ನಿಜಾಮ್ ಶೈಲಿ ಕಟ್ಟಡ ಉಳಿಸಿ, ಪುರಸಭೆ ಅನುದಾನದಲ್ಲಿ ಠಾಣೆಯನ್ನು ಇನ್ನಷ್ಟು ಅಭಿವೃಧ್ಧಿಗೊಳಿಸಿ ಗಮನಾರ್ಹ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂಬ ಸದಸ್ಯ ಕಲ್ಲೇಶ ತಾಳದ್ ಸಲಹೆ ಅಂಗೀಕರಿಸಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವುದಾಗಿ ಅಧ್ಯಕ್ಷ ಗಂಗಾಧರಸ್ವಾಮಿ ಹಿರೇಮಠ ಸಭೆಗೆ ತಿಳಿಸಿದರು.