ಕುಷ್ಟಗಿ: ತಾಲೂಕಿನ ದೋಟಿಹಾಳ ಗ್ರಾಮದ ಮಾರುತಿ ದೇವಸ್ಥಾನಕ್ಕೆ ಹಲವು ಬಾರಿ ಮನವಿ ಮಾಡಿದರೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ ಎಂದು ರೊಚ್ಚಿಗೆದ್ದ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಭೆಯ ಬಾವಿಗೆ ಇಳಿದು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.
ಜೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮವಹಿಸಿಲ್ಲ, ಕಚೇರಿಗೆ ಅಲೆದಾಡಿದರೂ ಸ್ಪಂದಿಸಿಲ್ಲ. ಲೈನ್ಮನ್ ನಿರ್ವಹಿಸಬೇಕಾದ ಕೆಲಸ, ಎಇಇ, ಎಇ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ರೊಚ್ಚಿಗೆದ್ದ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಂತೇಶ ಬದಾಮಿ ತಾಪಂ ಸಭೆಯ ಬಾವಿಗೆ ಇಳಿದು ಪ್ರತಿಭಟಿಸಿ ಆಕ್ರೋಶ ಹೊರಹಾಕಿದರು.
ಜೆಸ್ಕಾಂ ಎಇಇ ಮಂಜುನಾಥ, ಎಇ ನಟರಾಜ್ ವಿರುದ್ಧ ವಾಗ್ದಾಳಿ ನಡೆಸಿ, ದೋಟಿಹಾಳ ಹೊರವಲಯದ ಮಾರುತೇಶ್ವರ ದೇವಸ್ಥಾನಕ್ಕೆ ಈಗ ಹೋಗಿ ವಿದ್ಯುತ್ ಸಂಪರ್ಕ ಕಲ್ಪಿಸುವರೆಗೂ ಪ್ರತಿಭಟಿಸುವುದಾಗಿ ಎಚ್ಚರಿಸಿದರು. ತಾಪಂ ಉಪಾಧ್ಯಕ್ಷ ನಂಜಯ್ಯ ಗುರುವಿನ್ ಅವರು ಸದಸ್ಯರ ಬೇಡಿಕೆ ಸ್ಪಂದಿಸದೇ ಇದ್ದರೆ ನೀವ್ಯಾಕೆ? ಎಂದು ಪ್ರಶ್ನಿಸಿದರು. ಈಗ ಸಭೆಯಿಂದ ಹೊರ ನಡೆಯಿರಿ ವಿದ್ಯುತ್ ಸಂಪರ್ಕ ಕಲ್ಪಿಸಿ ಸಭೆಗೆ ಬನ್ನಿ ಎಂದು ಎಚ್ಚರಿಸಿದರು.
ಕಳೆದ ವರ್ಷ ಇದೇ ವಿಚಾರವಾಗಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ವೇಳೆ, ಜೆಸ್ಕಾಂ ಎಇಇ ಮಂಜುನಾಥ ಅವರ ಕಾಲು ಹಿಡಿದು ಬೇಡಿಕೊಳ್ಳಲಾಗಿತ್ತು. ಇದಕ್ಕೆ ಸಂಬಂಧಿಸಿದ ಫೈಲ್ ರಿಜೆಕ್ಟ್ ಮಾಡಿದ್ದಾರೆಂದು ಏರಿದ ದ್ವನಿಯಲ್ಲಿ ಆರೋಪಿಸಿದ ಮಹಾಂತೇಶ ಬದಾಮಿ, ವಿದ್ಯುತ್ ಸಂಪರ್ಕ ಕಲ್ಪಿಸುವರೆಗೂ ಸಭೆ ನಡೆಸಲು ಅವಕಾಶ ಕೊಡುವುದಿಲ್ಲ ಎಂದು ಪಟ್ಟು ಹಿಡಿದರು.