ಕುಷ್ಟಗಿ(ಕೊಪ್ಪಳ): ಕುಷ್ಟಗಿ ಪುರಸಭೆ ಗದ್ದುಗೆ ಏರುವ ಬಿಜೆಪಿ ಯೋಜನೆ ವಿಫಲಗೊಳಿಸಲು ಕಾಂಗ್ರೆಸ್ ತನ್ನ 11 ಸದಸ್ಯರನ್ನು ಅಜ್ಞಾತ ಸ್ಥಳಕ್ಕೆ ಕಳುಹಿಸಿದೆ.
ಕುಷ್ಟಗಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಘೋಷಿಸಲಾಗಿದೆ. ಅಧಿಕಾರ ಗದ್ದುಗೆ ಪಡೆಯುವ ಪ್ರಯತ್ನದಲ್ಲಿರುವ ಬಿಜೆಪಿ ತಂತ್ರಗಾರಿಕೆಯನ್ನು ಒಗ್ಗಟ್ಟಿನ ಮುರಿಯುವ ಚಿಂತನೆ ಕೈ ಪಾಳಯದ್ದಾಗಿದೆ.
ಕಾಂಗ್ರೆಸ್ ಪಕ್ಷದ ಚುನಾಯಿತ 12 ಸದಸ್ಯ ಬಲದಲ್ಲಿ ಈಗಾಗಲೇ 3ನೇ ವಾರ್ಡಿನ ಕಾಂಗ್ರೆಸ್ ಸದಸ್ಯೆಯನ್ನು ಬಿಜೆಪಿ ಹೈಜಾಕ್ ಮಾಡಿದೆ. ಈ ಸದಸ್ಯೆ ಕಾಂಗ್ರೆಸ್ ಪುರಸಭೆ ಸದಸ್ಯರೊಂದಿಗೆ ಇಲ್ಲಿಯವರೆಗೂ ಗುರುತಿಸಿಕೊಂಡಿಲ್ಲ. ಹೀಗಾಗಿ ಇವರನ್ನು ಕೈ ಬಿಟ್ಟು ಉಳಿದ ಕಾಂಗ್ರೆಸ್ 11 ಸದಸ್ಯರ ಒಗ್ಗಟ್ಟು ಮುರಿಯುವುದಕ್ಕೆ ಬಿಜೆಪಿಗೆ ಆಸ್ಪದವಾಗದಂತೆ ಇಂದು ಸಂಜೆ ಅಜ್ಞಾತ ಪ್ರವಾಸಕ್ಕಾಗಿ ಕುಷ್ಟಗಿಯಿಂದ ತೆರಳಿದ್ದಾರೆ.
8 ಸದಸ್ಯ ಬಲದ ಬಿಜೆಪಿ ಈಗಾಗಲೇ ಮೂವರು ಪಕ್ಷೇತರರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡು ಸದಸ್ಯ ಬಲವನ್ನು 11ಕ್ಕೆ ಹೆಚ್ಚಿಸಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಸದಸ್ಯರೊಬ್ಬರು ತಾವು ಒಟ್ಟಾಗಿ ಅಜ್ಞಾತ ಸ್ಥಳದಲ್ಲಿರುವುದಾಗಿ ದೃಢೀಕರಿಸಲು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಪೋಸ್ಟ್ ಮಾಡಿದ್ದು ಸದ್ಯ ಈ ಫೋಟೋ ವೈರಲ್ ಆಗಿದೆ.