ಕುಷ್ಟಗಿ: ಕುಷ್ಟಗಿಯ ಶರಣಪ್ಪ ಹೂಗಾರ ಅಪ್ಪಟ ಕನ್ನಡ ಪ್ರೇಮಿ. ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ಆಚರಣೆಗೆ ಅವರ ಕನ್ನಡದ ಮನೆಯಲ್ಲಿ ಎಲ್ಲಿಲ್ಲದ ಸಂಭ್ರಮ ಕಂಡು ಬರುತ್ತಿದೆ.
ಸಾರಿಗೆ ಇಲಾಖೆಯ ನೌಕರರಾಗಿ ಸೇವೆಯಲ್ಲಿದ್ದ ಶರಣಪ್ಪ ಹೂಗಾರ ಮೂಲತಃ ಕುಷ್ಟಗಿ ಪಟ್ಟಣದವರು. ಅವರು ಕನ್ನಡ ಹೊರತುಪಡಿಸಿ ಅನ್ಯ ಭಾಷೆ ಅದರಲ್ಲು ಇಂಗ್ಲಿಷ್ ಭಾಷೆ ಮಾತನಾಡುವರೆಂದರೆ ಅವರಿಗೆ ಆಗದು. ಅವರ ಭಾಷಾ ಪ್ರೇಮ ನವೆಂಬರ್ ತಿಂಗಳಿಗೆ ಸೀಮಿತವಾಗಿಸದೇ, ನಿತ್ಯದ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಇವರ ಮನೆಯಲ್ಲಿ ಅನ್ಯ ಭಾಷೆ ಸುಳಿಯುವುದಿಲ್ಲ. ಯಾರಾದರೂ ಅನ್ಯ ಭಾಷೆಯಲ್ಲಿ ಮಾತನಾಡಿದರೆ ಪ್ರತಿಕ್ರಿಯಿಸುವುದಿಲ್ಲ.
ಸಾರಿಗೆ ಇಲಾಖೆಯಲ್ಲಿ ಕನ್ನಡ ಅಂಕಿ ಬಳಸಿದ್ದಕ್ಕೆ ಕಿರುಕುಳ ಅನುಭವಿಸಿದ್ದು, ಸ್ವಯಂ ನಿವೃತ್ತಿ ಬಯಸಿದ್ದಾರೆ. ಅರ್ಚಕರಾಗಿ, ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಸ್ವಾವಲಂಬಿ ಜೀವನವನ್ನು ಕನ್ನಡದ ಮನೆಯಲ್ಲಿ ಕಳೆಯುತ್ತಿದ್ದಾರೆ. ಮನೆಯಲ್ಲಿ ಬಳಸುವ ಕೊಡಗಳಿಗೆ ಕನ್ನಡದ ಮನೆ ಎಂದು ಬರೆಯಿಸಿದ್ದಾರೆ.
ಹಿಂದಿನ ರಾಜ್ಯಾಧ್ಯಕ್ಷ ಡಾ.ನಲ್ಲೂರು ಪ್ರಸಾದ ಅವರು, ರಾಜ್ಯೋತ್ಸವ ದಿನದಂದು ಕನ್ನಡದ ಮನೆಗೆ ಭೇಟಿ ನೀಡಿ ಶರಣಪ್ಪ ಹೂಗಾರ ಅವರ ಭಾಷಾ ಪ್ರೇಮ ಶ್ಲಾಘಿಸಿದ್ದಾರೆ. ಅವರ ಪತ್ನಿ, ಪುತ್ರ, ಪುತ್ರಿಯರು ಅಚ್ಚ ಕನ್ನಡ ಭಾಷೆಯಲ್ಲಿ ಮಾತನಾಡುತ್ತಿರುವುದು ವಿಶೇಷ ಎನಿಸಿದೆ.
ಈಗಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಇಂಗ್ಲಿಷ್ ಭಾಷೆಗೆ ಅಂಟಿಕೊಳ್ಳದೇ ಕನ್ನಡ ಭಾಷೆಯನ್ನೇ ಬಳಸಬೇಕು ಎನ್ನುವ ವಾದ ಅವರದು. ಅವರ ಕನ್ನಡ ಪ್ರೇಮಕ್ಕೆ ಮನಸೋಲದವರಿಲ್ಲ. ಪ್ರತಿವರ್ಷ ತಮ್ಮ ಕನ್ನಡದ ಮನೆಯಲ್ಲಿ ಸಂಭ್ರಮದಿಂದ ರಾಜ್ಯೋತ್ಸವ ಆಚರಿಸುತ್ತಿದ್ದಾರೆ.