ಕುಷ್ಟಗಿ: ತಾಲೂಕು ಕ್ರೀಡಾಂಗಣದ ನೈರುತ್ಯ ದಿಕ್ಕಿನಲ್ಲಿ ಪವಿಲಿಯನ್ ಬ್ಲಾಕ್ ಹಾಗೂ ಒಳಾಂಗಣ ಕ್ರೀಡಾಂಗಣದ ಪಕ್ಕದಲ್ಲಿ ಮಲ್ಟಿ ಜಿಮ್ ಸೇರಿದಂತೆ ಇತರೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲು ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ನಾರಾಯಣಗೌಡ ಅವರೊಂದಿಗೆ ಚರ್ಚಿಸಿ ಮಂಜೂರಾತಿಗೆ ಪ್ರಯತ್ನಿಸಲಾಗುವುದು ಎಂದು ಕುರಿ ಮತ್ತು ಉಣ್ಣೆ ನಿಗಮ ಮಂಡಳಿ ಅಧ್ಯಕ್ಷ ಶರಣು ತಳ್ಳಿಕೇರಿ ಹೇಳಿದರು.
ತಾಲೂಕಾ ಕ್ರೀಡಾಂಗಣದಲ್ಲಿ ನಿರ್ಮಾಣ ಹಂತದ ಒಳಾಂಗಣ ಕ್ರೀಡಾಂಗಣ ಪರಿಶೀಲಿಸಿದ ಅವರು, ಈಗಾಗಲೇ 1.50 ಕೋಟಿ ರೂ. ವೆಚ್ಚದಲ್ಲಿ ಕುಷ್ಟಗಿ ತಾಲೂಕು ಕ್ರೀಡಾಂಗಣದಲ್ಲಿ ಪವಿಲಿಯನ್ ಬ್ಲಾಕ್ ಆವರಣ ಗೋಡೆ ಇತ್ಯಾದಿ ಕೆಲಸಗಳಾಗಿವೆ. ನೈರುತ್ಯ ದಿಕ್ಕಿನಲ್ಲಿ ಇನ್ನೊಂದು ಪವಿಲಿಯನ್ ಬ್ಲಾಕ್, ನಿರ್ಮಾಣ ಹಂತದ ಒಳಾಂಗಣ ಕ್ರೀಡಾಂಗಣದ ಪಕ್ಕದಲ್ಲಿ ಮಲ್ಟಿ ಜಿಮ್, ರನ್ನಿಂಗ್ ಟ್ರ್ಯಾಕ್ಗಳು, ಪ್ರತ್ಯೇಕ ಕಬಡ್ಡಿ, ವಾಲಿಬಾಲ್ ಟ್ರ್ಯಾಕ್ಗಳನ್ನು ನಿರ್ಮಿಸುವಂತೆ ಕ್ರೀಡಾಪಟುಗಳಿಂದ ಸಲಹೆ ಬಂದಿದ್ದು, ಸಲಹೆಗಳಿಗೆ ಸ್ಪಂದಿಸಿ ಅಗತ್ಯ ಸೌಕರ್ಯ ಕಲ್ಪಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಇನ್ನು ಕೊಪ್ಪಳ ಜಿಲ್ಲೆಯಲ್ಲಿ 50 ಎಕರೆ ವಿಸ್ತೀರ್ಣ ಜಮೀನು ಹಾಗೂ ನೀರಿನ ಸೌಲಭ್ಯ ಸೇರಿದಂತೆ ಇತರೆ ಮೂಲಸೌಕರ್ಯ ಆಧರಿಸಿ ನಾರಿ ಸುವರ್ಣ ಸಂವರ್ಧನಾ ಕೇಂದ್ರ ಆರಂಭಿಸಲಾಗುವುದು ಎಂದು ಶರಣು ತಳ್ಳಿಕೇರಿ ತಿಳಿಸಿದರು.
ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಕೊಪ್ಪಳ ಜಿಲ್ಲೆಗೆ ಕುರಿಗಾರರ ಅಭ್ಯುದಯಕ್ಕೆ ನಾರಿ ಸುವರ್ಣ ವಿಶೇಷ ತಳಿಯ ಸಂಶೋಧನಾ ಕೇಂದ್ರಕ್ಕೆ ಅನುಮತಿ ನೀಡಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸ್ಥಳ ಅಂತಿಮಗೊಳಿಸಲಾಗುವುದು. ನಾರಿ ಸುವರ್ಣ ವಿಶೇಷ ತಳಿಯು ಶೇ 60 ರಷ್ಟು ಅವಳಿ ಮರಿ, ಶೇ 20ರಷ್ಟು ತ್ರಿವಳಿ ಮರಿ ಹಾಕುವ ಕುರಿಯಾಗಿದೆ. ಈ ಕುರಿಗಳ ಸಾಕಾಣಿಕೆಯಿಂದ ಕುರಿಗಾರರ ಆರ್ಥಿಕ ಸಂಕಷ್ಟ ನೀಗಲಿದೆ ಎಂದರು.
ನೆರೆ ಹಾವಳಿ, ಪ್ರಕೃತಿ ವಿಪತ್ತು, ಆಕಸ್ಮಿಕ ಕಾರಣಗಳಿಗೆ ಸತ್ತ ಕುರಿಗಳಿಗೆ ನೀಡುವ ಅನುಗ್ರಹ ಯೋಜನೆ ಪುನಃ ಆರಂಭಿಸಲಾಗಿರುವುದು ಸಂತಸದ ಸಂಗತಿಯಾಗಿದ್ದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಡವರ ಬಂಧು, ರೈತ ಬಂಧು ಇದೀಗ ಕುರಿಗಾರರ ಬಂಧು ಆಗಿದ್ದಾರೆ ಎಂದರು.