ಕುಷ್ಟಗಿ (ಕೊಪ್ಪಳ): ಇಲ್ಲಿನ ಮಾರುತಿ ವೃತ್ತದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ನ ಕ್ಯಾಶಿಯರ್ಗೆ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಬ್ಯಾಂಕ್ನ್ನು ಸೀಲ್ಡೌನ್ ಮಾಡಲಾಗಿದೆ.
ಕಳೆದ ಏಪ್ರಿಲ್ 12ರಂದು ಬ್ಯಾಂಕ್ನ ವ್ಯವಸ್ಥಾಪಕರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಹೋಮ್ ಐಸೋಲೇಷನ್ನಲ್ಲಿದ್ದರು. ಏ. 28ರಂದು ಬ್ಯಾಂಕ್ನ ಕ್ಯಾಶಿಯರ್ಗೆ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಪರೀಕ್ಷೆ ಮಾಡಿಸಿದ್ದರು. ಶುಕ್ರವಾರ ಅವರ ವರದಿ ಬಂದಿದ್ದು, ಸೋಂಕು ದೃಢಪಟ್ಟಿದೆ. ಹೀಗಾಗಿ, ಬ್ಯಾಂಕ್ಗೆ ಸ್ಯಾನಿಟೈಸರ್ ಸಿಂಪಡಿಸಿ ಸೀಲ್ಡೌನ್ ಮಾಡಲಾಗಿದೆ.
ಕುಷ್ಟಗಿ ತಾಲೂಕಿನ ನಿಲೋಗಲ್ ಗ್ರಾ.ಪಂ. ಪಿಡಿಒ ಹಾಗೂ ಬಿಜಕಲ್ ಗ್ರಾ.ಪಂ.ಕಾರ್ಯದರ್ಶಿಗೂ ಕೊರೊನಾ ಸೋಂಕು ದೃಢಪಟ್ಟಿದೆ.
ಅನಗತ್ಯ ಓಡಾಟ ಹೆಚ್ಚಳ:
ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಎಷ್ಟೇ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದರೂ ಉಲ್ಲಂಘಿಸುವವರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗಾಗಿ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ. ಈ ಸಮಯದಲ್ಲಿ ಕುಂಟು ನೆಪ ಹೇಳಿ ಓಡಾಡುವ ಜನರ ಸಂಖ್ಯೆ ಹೆಚ್ಚಳವಾಗಿದ್ದು, ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.