ಕೊಪ್ಪಳ : ಜಿಲ್ಲೆಯ ಕುಷ್ಟಗಿ ಪೊಲೀಸರು ಪಕ್ಷಪಾತ ಮಾಡುತ್ತಿದ್ದಾರೆ ಎಂದು ವಾಲ್ಮೀಕಿ ನಾಯಕ ಮಹಾಸಭಾದ ಜಿಲ್ಲಾಧ್ಯಕ್ಷ ಟಿ.ರತ್ನಾಕರ್ ಆರೋಪಿಸಿದ್ದಾರೆ.
ನಗರದ ಮೀಡಿಯಾ ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕುಷ್ಟಗಿ ತಾಲೂಕಿನ ತಳುವಗೇರಾ ಗ್ರಾಮದಲ್ಲಿ ಇದೇ ನವೆಂಬರ್ 9 ರಂದು ಪರಿಶಿಷ್ಟ ಪಂಗಡದ ವ್ಯಕ್ತಿ ಹನುಮಂತಪ್ಪ ಬಲಕುಂದಿ ಮೇಲೆ ಹಲ್ಲೆ ನಡೆಸಿದ್ದರು. ಟ್ರ್ಯಾಕ್ಟರ್ ಮೂಲಕ ಡಿಕ್ಕಿ ಹೊಡೆಸಲಾಗಿದ್ದು, ಅದನ್ನು ರಸ್ತೆ ಅಪಘಾತ ಎಂದು ಮೊದಲು ಕುಷ್ಟಗಿ ಪೊಲೀಸರು ದೂರು ದಾಖಲಿಸಿಕೊಂಡಿದ್ದರು. ಆದರೆ ಅದು ಉದ್ದೇಶಪೂರ್ವಕವಾಗಿ ನಡೆದಿರುವ ಘಟನೆ. ಈ ಬಗ್ಗೆ ಪ್ರತ್ಯಕ್ಷದರ್ಶಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಆದರೆ, ಕುಷ್ಟಗಿ ಪೊಲೀಸರು ಆರೋಪಿಗಳನ್ನು ಬಂಧಿಸದೇ ಸ್ವಜಾತಿ ಪಕ್ಷಪಾತ ಮಾಡಿ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ತಳುವಗೇರಾ ಗ್ರಾಮದಲ್ಲಿ ಈ ಹಿಂದೆ ಜಾತ್ರೆಯ ಸಂದರ್ಭದಲ್ಲಿ ನಡೆದ ಗಲಾಟೆಯಲ್ಲಿ ಓರ್ವ ವ್ಯಕ್ತಿಯ ಕೊಲೆಯಾಗಿತ್ತು. ಈಗ ಮತ್ತೆ ಹನುಮಂತಪ್ಪ ಬಲಕುಂದಿ ಎಂಬ ಯುವಕನನ್ನು ಅದೇ ಗ್ರಾಮದ ಸುರೇಶ್ ಹಾಗೂ ಇನ್ನಿತರರು ಹಲ್ಲೆ ನಡೆಸಿದ ಪರಿಣಾಮ ಹನುಮಂತಪ್ಪ ಬಲಕುಂದಿ ಮೃತಪಟ್ಟಿದ್ದಾನೆ. ಘಟನೆ ನಡೆದ ದಿನ ಹನುಮಂತಪ್ಪನ ಜೊತೆಗಿದ್ದ ಅಭಿಷೇಕ್ ಬಡಿಗೇರ ಎಂಬ ಯುವಕ ಇದನ್ನು ಕಣ್ಣಾರೆ ನೋಡಿದ್ದಾನೆ. ಆದರೆ ಪೊಲೀಸರು ಮಾತ್ರ ಇದು ಅಪಘಾತ ಎಂದು ಮೋಸದ ಪ್ರಕರಣ ದಾಖಲಿಸಿಕೊಳ್ಳುವ ಮೂಲಕ ಪಕ್ಷಪಾತ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.