ಕುಷ್ಟಗಿ (ಕೊಪ್ಪಳ): ಕುಷ್ಟಗಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಗದ್ದುಗೆ ಏರಲು ಬಿಜೆಪಿ ಶತಾಯ ಗತಾಯ ಪ್ರಯತ್ನ ಮುಂದುವರಿಸಿದ್ದು, ಕಾಂಗ್ರೆಸ್ ಪಕ್ಷದ ನಿದ್ದೆಗೆಡಿಸಿದೆ.
ಒಟ್ಟು 23 ಸದಸ್ಯರಲ್ಲಿ 12 ಸದಸ್ಯ ಬಲವನ್ನು ಕುಗ್ಗಿಸಲು ಬಿಜೆಪಿ ಈಗಾಗಲೇ ಕಾರ್ಯಾಚರಣೆಗೆ ಇಳಿದಿದೆ. ಹೀಗಾಗಿ ತನ್ನ 8 ಸದಸ್ಯ ಬಲದೊಂದಿಗೆ ಇಬ್ಬರು ಪಕ್ಷೇತರ ಹಾಗೂ ಓರ್ವ ಅವಿರೋಧ ಅಯ್ಕೆಯಾದ ಸದಸ್ಯನ ಬೆಂಬಲದಿಂದ 11ಕ್ಕೆ ಹೆಚ್ಚಿಸಿಕೊಂಡಿದೆ. ಅಧಿಕಾರ ವಶಪಡಿಸಿಕೊಳ್ಳಲು ಇನ್ನೇನು ಒಬ್ಬ ಸದಸ್ಯನ ಬೆಂಬಲ ಅಗತ್ಯವಿದ್ದು, ಈಗಾಗಲೇ 3ನೇ ವಾರ್ಡ್ ಕಾಂಗ್ರೆಸ್ ಸದಸ್ಯೆ ಗೀತಾ ಶರಣಪ್ಪ ಅವರಿಗೆ ಗಾಳ ಹಾಕಿದೆ.
ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲು 3ನೇ ವಾರ್ಡ್ ಸದಸ್ಯೆಯ ನಡೆ ನಿರ್ಣಾಯಕ ಘಟ್ಟ ತಲುಪಿದೆ. ಕಾಂಗ್ರೆಸ್ ಪಾಳಯಕ್ಕೆ ಈ ಬೆಳವಣಿಗೆ ಬಿಸಿ ತುಪ್ಪವಾಗಿದೆ. ಕುಷ್ಟಗಿ ಪುರಸಭೆ ಅಧ್ಯಕ್ಷ ಸ್ಥಾನ ಬಹುಮತವಿದ್ದಾಗ್ಯೂ ಈಗಿನ ಬೆಳವಣಿಗೆಯಿಂದ ಕಾಂಗ್ರೆಸ್ಗೆ ಗೆಲುವು ಅಷ್ಟು ಸುಲಭವಲ್ಲ ಎನ್ನುವುದು ಮನವರಿಕೆಯಾಗಿದೆ. ಪುರಸಭೆ ಅಧಿಕಾರಕ್ಕಾಗಿ ಮುಂದುವರಿದ ಕಾಂಗ್ರೆಸ್, ಬಿಜೆಪಿಯ ಈ ಕಸರತ್ತು ಹಾಲಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹಾಗೂ ಮಾಜಿ ಶಾಸಕ, ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿರುವ ದೊಡ್ಡನಗೌಡ ಪಾಟೀಲ ಅವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿ ತಿರುವು ಪಡೆದುಕೊಂಡಿದೆ.