ಕೊಪ್ಪಳ: ದೈವತ್ವಕ್ಕೇರಿ ಜನರಿಂದ ಪೂಜೆಗೊಳ್ಳುವ ರಾಜರನ್ನು ಕಾಣುವುದು ಇತಿಹಾಸದಲ್ಲಿ ವಿರಳಾತಿವಿರಳ. ಅಂತಹ ರಾಜರಲ್ಲಿ ಕುಮ್ಮಟದುರ್ಗದ ಗಂಡುಗಲಿ ಕುಮಾರರಾಮ ಒಬ್ಬ.
ಸ್ಥಳೀಯರಿಂದ ರಾಮಸ್ವಾಮಿ ಅಥವಾ ಕುಮಾರರಾಮ ಎಂಬ ಹೆಸರಿನಿಂದ ಇಂದಿಗೂ ಪೂಜಿಸಲ್ಪಡುತ್ತಿದ್ದಾನೆ. ಆದರೆ ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದ ಗಂಡುಗಲಿ ಕುಮಾರರಾಮನ ಸಾಮ್ರಾಜ್ಯದ ಅವಶೇಷಗಳು ಆತನ ಕಥೆ ಹೇಳುವಂತಾಗಿದೆ.
ಜಬ್ಬಲಗುಡ್ಡ, ಮುಕ್ಕುಂಪಿ ಗುಡ್ಡ, ಆಗೋಲಿ, ಹೇಮಗುಡ್ಡ, ಕುಮ್ಮಟದುರ್ಗ ಹಾಗೂ ಹಳೆಕುಮ್ಮಟ ಸೇರಿ ಒಟ್ಟು ಏಳು ಬೆಟ್ಟಗಳ ನಡುವೆ ಬೆಟ್ಟದಲ್ಲಿ ಕುಮಾರರಾಮನ ದೇವಸ್ಥಾನವಿದೆ. ಈಗಲೂ ಕುಮಾರರಾಮನನ್ನು ಜನರು ದೇವರೆಂದು ಪೂಜಿಸಿ ಜಾತ್ರೆಯನ್ನು ಮಾಡುತ್ತಾರೆ. ಕುಮಾರರಾಮನ ಗುಡಿಯಿಂದ ಅಕ್ಕಿ ಪಡಿಯನ್ನು ಹುಲಿಗಿ ದೇವಸ್ಥಾನಕ್ಕೆ ಕಳಿಸಿದ ಬಳಿಕ ಶ್ರೀ ಹುಲಿಗೆಮ್ಮದೇವಿ ಜಾತ್ರೆ ಪ್ರಾರಂಭವಾಗುವುದು ವಾಡಿಕೆ. ಇಂತಹ ಐತಿಹಾಸಿಕ ಪುರುಷನ ಸಾಮ್ರಾಜ್ಯದ ಇತಿಹಾಸ ಸಾರುವ ಅನೇಕ ಅವಶೇಷಗಳು ಕಾಲನ ತುಳಿತಕ್ಕೊಳಗಾಗಿ ಇತಿಹಾಸದ ಗರ್ಭ ಸೇರುತ್ತಿವೆ. ಕುಮ್ಮಟದುರ್ಗದ ಕೋಟೆ, ಅರಮನೆಯ ಅವಶೇಷಗಳು, ಬೆಟ್ಟದಲ್ಲಿರುವ ಜೈನ ಬಸದಿ ಹೀಗೆ ಅನೇಕ ಸ್ಮಾರಕಗಳು ಅಳಿವಿನ ಅಂಚಿನಲ್ಲಿವೆ.
ಕುಮಾರರಾಮನ ಬಗೆಗೆ ನಿರ್ಲಕ್ಷ್ಯ ವಹಿಸಿದ ಪರಿಣಾಮ, ಕುಮಾರರಾಮ ಈ ಭಾಗದ ಜನರಿಗೆ ಮಾತ್ರ ಗೊತ್ತಿರುವ ಚಾರಿತ್ರಿಕ ಪುರುಷನಾಗಿ ಉಳಿದುಕೊಂಡಿದ್ದಾನೆ ಎಂಬುದು ಈ ಭಾಗದ ಜನರ ಬೇಸರ. ಕಾಲಗರ್ಭದಲ್ಲಿ ಹೂತು ಹೋಗುತ್ತಿರುವ ಗಂಡುಗಲಿ ಕುಮಾರರಾಮನ ಕಮ್ಮಟ ದುರ್ಗದ ಅವಶೇಷಗಳನ್ನು ಪುರಾತತ್ವ ಮತ್ತು ಪ್ರಾಚ್ಯವಸ್ತು ಇಲಾಖೆ ಪುನರುಜ್ಜೀವನಗೊಳಿಸಲು ಮುಂದಾಗಬೇಕು ಹಾಗೂ ಇದನ್ನೊಂದು ಪ್ರವಾಸಿ ತಾಣವನ್ನಾಗಿ ಮಾರ್ಪಡಿಸುವ ಮೂಲಕ ಮುಂದಿನ ಪೀಳಿಗೆಗೆ ಈ ಭವ್ಯ ಇತಿಹಾಸವನ್ನು ಸಂರಕ್ಷಿಸಬೇಕು ಎನ್ನುತ್ತಾರೆ ಸ್ಥಳೀಯರಾದ ಪಾಮನಾಯಕ ವಾಲ್ಮೀಕಿ. ಒಟ್ಟಾರೆಯಾಗಿ ಇತಿಹಾಸದಲ್ಲಿ ದೈವತ್ವಕ್ಕೇರಿದ ಗಂಡುಗಲಿ ಕುಮಾರರಾಮನ ಸ್ಮಾರಕಗಳ ಕಾಯಕಲ್ಪಕ್ಕೆ ಸರ್ಕಾರ ಮುಂದಾಗಬೇಕಿದೆ.