ಕೊಪ್ಪಳ: ಮಹಾರಾಷ್ಟ್ರದಲ್ಲಾದ ರಾಜಕೀಯ ಬೆಳವಣಿಗೆ ಕುರಿತಂತೆ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್‌ರಾಜ್ ಇಲಾಖೆ ಸಚಿವ ಕೆ.ಎಸ್. ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದು, ಯಾವುದೇ ಪಕ್ಷಕ್ಕೆ ಬಹುಮತ ಬರದಿದ್ದಾಗ ಇಂತಹ ಬೆಳವಣಿಗೆ ಸಹಜ ಎಂದು ಹೇಳಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆ ಕಾಂಗ್ರೆಸ್ಗಾಗಿರುವ ಮುಖಭಂಗ. ಹಿಂದುತ್ವದ ಪಕ್ಷವಾದ ಶಿವಸೇನೆಯೊಂದಿಗೆ ಕಾಂಗ್ರೆಸ್ ಯಾವುದೇ ಕಾರಣಕ್ಕೂ ಮೈತ್ರಿ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಮೊದಲಿನಿಂದಲೂ ಹೇಳಿಕೊಂಡು ಬಂದಿದೆ. ಆದರೀಗ ಅಧಿಕಾರದ ಆಸೆಗೆ ಮೈತ್ರಿಗೆ ಮುಂದಾಗಿ ಕಾಂಗ್ರೆಸ್ಗೆ ಮುಖಭಂಗವಾಗಿದೆ ಎಂದರು.
ಚುನಾವಣಾಪೂರ್ವದಲ್ಲಿ ಶಿವಸೇನೆ ಬಿಜೆಪಿ ಜೊತೆ ಇತ್ತು, ಈಗ ಇಲ್ಲ. ಕಾಂಗ್ರೆಸ್‌ನ ಅಧಿಕಾರದ ಲಾಲಸೆ ದೇಶದ ಮುಸಲ್ಮಾನರಿಗೆ ಅರ್ಥವಾಗಬೇಕಿದೆ. ಈಗಿರೋದು ಸೋನಿಯಾ ಕಾಂಗ್ರೆಸ್. ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ ಎಂದು ಕಿಡಿಕಾರಿದ್ರು.
ಸಿದ್ದರಾಮಯ್ಯ ಏನೇ ಹೇಳಿದರೂ ಅದು ಉಲ್ಟಾ ಆಗುತ್ತೆ. ಯಡಿಯೂರಪ್ಪ ಸಿಎಂ ಆಗಲ್ಲ ಅಂದರು ಯಡಿಯೂರಪ್ಪ ಸಿಎಂ ಆದರು. ಮೋದಿ ಪ್ರಧಾನಿಯಾಗಲ್ಲ ಅಂದ್ರು ಮೋದಿ ಪ್ರಧಾನಿಯಾದರು. ಸಿದ್ದರಾಮಯ್ಯ ಏನೇ ಹೇಳಿದರೂ ಅದು ಸುಳ್ಳಾಗುತ್ತೆ. ಉಪಚುನಾಚಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ತಾರೆ. 8 ಕ್ಕೂ ಹೆಚ್ಚು ಬಿಜೆಪಿ ಅಭ್ಯರ್ಥಿಗಳು ಗೆದ್ದರೆ ಸಿದ್ದರಾಮಯ್ಯ ವಿಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ಕೊಡ್ತಾರಾ? ಎಂದು ಪ್ರಶ್ನಿಸಿದರು.
ಅನರ್ಹರನ್ನು ಸೋಲಿಸುವುದೇ ನನ್ನ ಗುರಿ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ಕೆ.ಎಸ್.ಈಶ್ವರಪ್ಪ, ತಂದೆ ಹಾಗೂ ಮಗನನ್ನು ಗೆಲ್ಲಿಸಿಕೊಳ್ಳಲಾಗಿಲ್ಲ. ಅನರ್ಹರನ್ನು ಸೋಲಿಸೋಕೆ ಆಗಲ್ಲ ಎಂದು ಟಾಂಗ್ ನೀಡಿದರು. ನಮ್ಮನ್ನು ನಂಬಿ ಬಂದವರಿಗೆ ನಾವು ಯಾವತ್ತೂ ಅನ್ಯಾಯ ಮಾಡೋದಿಲ್ಲ. ಅವರ ಗೆಲುವಿಗಾಗಿ ನಾವು ಶ್ರಮಿಸುತ್ತೇವೆ. ಕಾಂಗ್ರೆಸ್ ಹೊರತುಪಡಿಸಿ ಯಾರೇ ಬಂದರೂ ನಾವು ಅವರ ಜೊತೆ ಕೈಜೋಡಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು .