ಕೊಪ್ಪಳ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ, ವಿವಿಧ ಕಾರ್ಮಿಕ ಸಂಘಟನೆಗಳ ಸಹಯೋಗದೊಂದಿಗೆ ಜನವರಿ 8 ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಕಾರ್ಮಿಕ ಘಟಕದ ಅಧ್ಯಕ್ಷ ಡಾ. ಎಸ್.ಎಸ್. ಪ್ರಕಾಶಂ ತಿಳಿಸಿದ್ದಾರೆ.
ನಗರದ ಮೀಡಿಯಾ ಕ್ಲಬ್ನಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಸಂಘಟಿತ ಹಾಗೂ ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಕಷ್ಟು ಅನ್ಯಾಯ ಮಾಡುತ್ತಿದೆ. ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದ್ದು, ಬಿಎಸ್ಎನ್ಎಲ್ ನಷ್ಟ ತೋರಿಸುತ್ತಿದೆ ಎಂದರು. ಇಲ್ಲಿ ನಷ್ಟವಾಗಲು ಅಲ್ಲಿನ ಕಾರ್ಮಿಕರು ಕಾರಣರಲ್ಲ ಆಡಳಿತ ಮಂಡಳಿ ಕಾರಣ. ಇದು ಕೇವಲ ಉದಾಹರಣೆ ಎಂದು ತಿಳಿಸಿದರು.
ಇಂತಹ ಅನೇಕ ಸಾರ್ವಜನಿಕ ಉದ್ದಿಮೆಗಳಿವೆ. ಅವುಗಳನ್ನು ಖಾಸಗೀಕರಣ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದರು. ಇಂತಹ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ, ಆಯಾ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಶಾಂತಿಯುತ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಹೇಳಿದ್ರು. ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಎಂ.ಆರ್. ವೆಂಕಟೇಶ್, ಶಿವ ಪ್ರಸಾದ್, ಶ್ರೀನಿವಾಸ್ ಪಂಡಿತ್, ಚಾಂದ್ ಪಾಷಾ ಕಿಲ್ಲೇದಾರ್ ಉಪಸ್ಥಿತರಿದ್ದರು.