ಕೊಪ್ಪಳ: ಜಿಲ್ಲೆಯ ಕನಕಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಸದೆ ಬಿಲ್ ಎತ್ತುವಳಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಧಿಕಾರಿಗಳ ತಲೆದಂಡವಾಗಿದೆ. ಅಲ್ಲದೆ ಇನ್ನೊಬ್ಬ ಅಧಿಕಾರಿ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಕೋರಿ ಪತ್ರ ಬರೆಯಲಾಗಿದೆ.
ಜಿಲ್ಲಾ ಪಂಚಾಯ್ತಿ ಸಿಇಓ ರಘುನಂದನಮೂರ್ತಿ ಅವರು ಪಂಚಾಯತ್ ರಾಜ್ ಇಂಜಿನಿಯರಿಂಗ್ ಗಂಗಾವತಿ ಉಪವಿಭಾಗದ ಮೂವರು ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಪಂಚಾಯತ್ ರಾಜ್ ಇಂಜಿನಿಯರಿಂಗ್ ಗಂಗಾವತಿ ಉಪವಿಭಾಗದ ಕಿರಿಯ ಅಭಿಯಂತರ ರವಿಕುಮಾರ್, ಹಿಂದಿನ ಪ್ರಭಾರಿ ಸಹಾಯಕ ಇಂಜಿನಿಯರ್ ಎಸ್.ಡಿ. ನಾಗೋಡ ಹಾಗೂ ಲೆಕ್ಕಾಧೀಕ್ಷಕ ಎಂ. ನಾರಾಯಣಸ್ವಾಮಿ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಅಲ್ಲದೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ನ ಕಾರ್ಯನಿರ್ವಾಹಕ ಇಂಜಿನಿಯರ್ ರಂಗಯ್ಯ ಬಡಿಗೇರ್ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಜಿಲ್ಲಾ ಪಂಚಾಯತ್ ಸಿಇಓ ಪತ್ರ ಬರೆದಿದ್ದಾರೆ.
ಕಳೆದ ವರ್ಷ ಸುರಿದ ಮಳೆ ಹಾಗೂ ಪ್ರವಾಹದಿಂದಾಗಿ ಕನಕಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಾನಿಗೊಳಗಾದ ರಸ್ತೆ ಹಾಗೂ ಸೇತುವೆಗಳ ನವೀಕರಣ ಹಾಗೂ ಪುನರ್ ನಿರ್ಮಾಣ ಕಾಮಗಾರಿಗಳಿಗೆ ಬಿಡುಗಡೆಯಾದ ಹಣವನ್ನು ಕಾಮಗಾರಿ ನಡೆಸದೆ ಹಣ ಎತ್ತುವಳಿ ಮಾಡಿರುವ ಆರೋಪ ಕೇಳಿ ಬಂದಿದ್ದವು. ಈ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪಂಚಾಯ್ತಿ ಸಿಇಓ ಅವರು, ಕಾಮಗಾರಿಗಳ ಹಣ ಸಂದಾಯ ಮಾಡುವಲ್ಲಿ ಇವರು ಕರ್ತವ್ಯ ಲೋಪವೆಸಗಿರೋದು ಮೇಲ್ನೋಟಕ್ಕೆ ಸಾಬೀತಾಗಿದೆ.
ಈ ಮೂಲಕ ಸರ್ಕಾರಕ್ಕೆ ಲಕ್ಷಾಂತರ ರುಪಾಯಿ ನಷ್ಟವಾಗುವಂತೆ ಮಾಡಿರುವ ಆರೋಪದ ಮೇಲೆ ಮೂವರು ಅಧಿಕಾರಿಗಳನ್ನು ಅಮಾನತು ಮಾಡಿ ಹಾಗೂ ಇನ್ನೊಬ್ಬ ಅಧಿಕಾರಿಗೆ ಷೋಕಾಸ್ ನೋಟೀಸ್ ಜಾರಿ ಮಾಡಿ ಜಿಲ್ಲಾ ಪಂಚಾಯತ್ ಸಿಇಓ ರಘುನಂದನಮೂರ್ತಿ ಅವರು ಆದೇಶ ಮಾಡಿದ್ದಾರೆ.