ಕುಷ್ಟಗಿ (ಕೊಪ್ಪಳ): ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಕಾರಣಕ್ಕೆ 22 ವರ್ಷದ ಪುತ್ರನನ್ನು ಪ್ರಿಯಕರನೊಂದಿಗೆ ಸೇರಿ ತಾಯಿಯೇ ಹತ್ಯೆ ಮಾಡಿ ಹೂತಿಟ್ಟ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ನಡೆದಿದ್ದು, ಈ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಮಾರ್ಚ್ 2ರಂದು ಬಂಧಿಸಿದ್ದರು.
ಇದೀಗ (ಮಾರ್ಚ್ 5, ಶನಿವಾರ) ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಾಯಕ ಆಯುಕ್ತ ಬಸವಣ್ಣೆಪ್ಪ ಕಲಶೆಟ್ಟರ್ ಸಮ್ಮುಖದಲ್ಲಿ ಶವ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಪ್ರಕರಣದ ವಿವರ: ಬಸವರಾಜ ಶರಣಪ್ಪ ದೋಟಿಹಾಳ ಕೊಲೆಯಾದ ಯುವಕ. ಕಳೆದ ಫೆ.15 ರಂದು ಮ್ಯಾದರಡೊಕ್ಕಿ ಗ್ರಾಮದ ಅಮರಮ್ಮ ದೋಟಿಹಾಳ ಅವರು ತಮ್ಮ ಮನೆಯಲ್ಲಿ ಗ್ರಾ.ಪಂ. ಸದಸ್ಯ ಅಮರಪ್ಪ ಕಂದಗಲ್ ಜೊತೆ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದನ್ನು ಅಮರಮ್ಮ ದೋಟಿಹಾಳ ಎರಡನೇ ಪುತ್ರನಾದ ಬಸವರಾಜ ಶರಣಪ್ಪ ದೋಟಿಹಾಳ (ಕೊಲೆಯಾದ ಯುವಕ) ನೋಡಿದ್ದ. ಇದನ್ನು ಬಸವರಾಜ ಶರಣಪ್ಪ ದೋಟಿಹಾಳ ವಿರೋಧಿಸಿದ್ದಾನೆ.
ಈ ಹಿನ್ನೆಲೆಯಲ್ಲಿ ಎಲ್ಲಿ ಗುಟ್ಟು ರಟ್ಟಾದೀತು ಎಂದು ಅಮರಪ್ಪ ಕಂದಗಲ್, ಅಮರಮ್ಮ ದೋಟಿಹಾಳ ಹಾಗೂ ಆಕೆಯ ಮೊದಲ ಮಗ ಅಮರೇಶ ಸೇರಿಕೊಂಡು ಬಸವರಾಜ ಶರಣಪ್ಪ ದೋಟಿಹಾಳನನ್ನು ಗುದ್ದಲಿಯಿಂದ ಹಲ್ಲೆ ಮಾಡಿ ಕೊಲೆಗೈದಿದ್ದರು. ನಂತರ ಶವವನ್ನು ಗೋಣಿ ಚೀಲದಲ್ಲಿ ತುಂಬಿ ಬೈಕ್ನಲ್ಲಿ ಹೊತ್ತೊಯ್ದು ಕೃಷಿ ಹೊಂಡದ ಬಳಿ ಗುಂಡಿ ಅಗೆದು ಮುಚ್ಚಿದ್ದರು.
ಕೊಲೆಗೈದವರಿಂದಲೇ ದೂರು: ನಂತರ ತಾವರಗೇರಾ ಪೊಲೀಸ್ ಠಾಣೆಯಲ್ಲಿ ಬಸವರಾಜ ಶರಣಪ್ಪ ದೋಟಿಹಾಳ ಕಾಣೆಯಾಗಿದ್ದಾನೆಂದು ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದಾಗ, ಅಮರಪ್ಪ ಕಂದಗಲ್, ಅಮರಮ್ಮ ದೋಟಿಹಾಳ ಹಾಗು ಅಮರೇಶ ದೋಟಿಹಾಳ ಮೂವರೂ ಬಸವರಾಜ ಶರಣಪ್ಪ ದೋಟಿಹಾಳನನ್ನು ಕೊಲೆ ಮಾಡಿ ಶವವನ್ನು ಹೂತಿಟ್ಟಿರುವುದಾಗಿ ಪೊಲೀಸ್ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾರೆ. ಮೂವರನ್ನು ಮಾರ್ಚ್ 2ರಂದು ಬಂಧಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಹೂತಿಟ್ಟ ಶವವನ್ನು ಸಹಾಯಕ ಆಯುಕ್ತ ಬಸವಣ್ಣೆಪ್ಪ ಕಲಶೆಟ್ಟರ್ ಸಮ್ಮುಖದಲ್ಲಿ ಹೊರತೆಗೆದು ಫೊರೆನ್ಸಿಕ್ ಲ್ಯಾಬ್ಗೆ ಕಳುಹಿಸಲಾಗಿದೆ.
ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ಪುತ್ರನ ಹತ್ಯೆಗೈದ ತಾಯಿ; ಮೂವರು ಆರೋಪಿಗಳ ಬಂಧನ
ಸಿಪಿಐ ನಿಂಗಪ್ಪ ರುದ್ರಪ್ಪಗೋಳ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ ಎಂದು ಬಸವಣ್ಣೆಪ್ಪ ಕಲಶೆಟ್ಟರ್ ಮಾಹಿತಿ ನೀಡಿದರು. ಈ ವೇಳೆ ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ, ತಹಶೀಲ್ದಾರ ಎಂ.ಸಿದ್ದೇಶ, ಸಿಪಿಐ ನಿಂಗಪ್ಪ ರುದ್ರಪ್ಪಗೋಳ, ಪಿಎಸೈ ವೈಶಾಲಿ ಝಳಕಿ ಇದ್ದರು.