ಕೊಪ್ಪಳ: ಜಿಲ್ಲೆಯಲ್ಲಿ ಮುಂಗಾರು ಉತ್ತಮವಾಗಿ ಪ್ರಾರಂಭಗೊಂಡಿದ್ದು, ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಕೊರೊನಾ ಭೀತಿ ಹಾಗೂ ಲಾಕ್ಡೌನ್ನಿಂದಾಗಿ ಹಣಕಾಸಿನ ಕೊರತೆಯ ನಡುವೆಯೂ ಈಗಾಗಲೇ ರೈತರು ಬಿತ್ತನೆ ಕಾರ್ಯ ಚುರುಕುಗೊಳಿಸಿದ್ದಾರೆ.
ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ ಎಂಬ ಮಾತು ಅಕ್ಷರಶಃ ಸತ್ಯ. ತಾನೆಷ್ಟೇ ತೊಂದರೆ ಅನುಭವಿಸಿದರೂ ಕೂಡ ಅನ್ನದಾತ ಉತ್ತಿ, ಬಿತ್ತುವುದನ್ನು ಮಾತ್ರ ಬಿಡುವುದಿಲ್ಲ. ಕೊರೊನಾ ಭೀತಿ ಹಾಗೂ ಲಾಕ್ಡೌನ್ನಿಂದ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರೂ ಕೂಡ ಬಿತ್ತನೆ ಮಾಡುವತ್ತ ಚಿತ್ತ ಹರಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಆಗಿದ್ದು, ಉಳುಮೆಗೆ ಅನುಕೂಲವಾಗಿದೆ. ಹೀಗಾಗಿ ಹೊಲಗಳನ್ನು ಬಿತ್ತನೆಗೆ ಸಿದ್ಧತೆ ಮಾಡಿಕೊಂಡು ಬಿತ್ತನೆ ಮಾಡುತ್ತಿದ್ದಾರೆ.
ಜೂನ್ 1ರವರೆಗೆ ವಾಡಿಕೆ ಮಳೆ 84 ಮಿಲಿ ಮೀಟರ್ ಆಗಬೇಕಿತ್ತು. ಆದರೆ ಈ ಬಾರಿ ಜೂನ್ 1ರವೆರೆಗೆ 103 ಮಿಲಿ ಮೀಟರ್ ಮಳೆಯಾಗಿದೆ. ಅಂದರೆ ವಾಡಿಕೆ ಮಳೆಗಿಂತ ಶೇಕಡಾ 25ರಷ್ಟು ಮಳೆ ಹೆಚ್ಚಾಗಿದೆ. ಹೀಗಾಗಿ ರೈತರು ಬಿತ್ತನೆಯಲ್ಲಿ ತೊಡಗಿದ್ದಾರೆ. ಉತ್ತಮ ಮಳೆಯಾಗಿರುವ ಹಿನ್ನೆಲೆ ಈಗಾಗಲೇ ಜಿಲ್ಲೆಯ ಕೆಲ ಭಾಗಗಳಲ್ಲಿ ಹೆಸರು, ಜೋಳ, ಸೂರ್ಯಕಾಂತಿ ಸೇರಿದಂತೆ ಇನ್ನಿತರೆ ಬೀಜಗಳನ್ನು ಬಿತ್ತನೆ ಮಾಡಲಾರಂಭಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 3,08,000 ಹೆಕ್ಟೇರ್ ಬಿತ್ತನೆ ಪ್ರದೇಶವಿದೆ. ಈ ಪೈಕಿ ಈಗಾಗಲೇ ಸುಮಾರು 40 ಸಾವಿರ ಹೆಕ್ಟೇರ್ ಪ್ರದೇಶ ಬಿತ್ತನೆಯಾಗಿದೆ. ಬಿತ್ತನೆಗೆ 15,997 ಕ್ವಿಂಟಲ್ ಬಿತ್ತನೆ ಬೀಜಗಳು ಬೇಕಾಗಿದ್ದು, ಅಗತ್ಯಕ್ಕೆ ತಕ್ಕಷ್ಟು ಬಿತ್ತನೆ ಬೀಜ ಲಭ್ಯವಿದೆ. 3,500 ಟನ್ ರಸಗೊಬ್ಬರ ಅಗತ್ಯವಿದ್ದು, ಅದು ಸಹ ಲಭ್ಯವಿದೆ. ಬಿತ್ತನೆಗೆ ಬೇಕಾದ ಬೀಜ, ಗೊಬ್ಬರದ ಕೊರತೆ ಇಲ್ಲ. ಜಿಲ್ಲೆಯ 20 ರೈತ ಸಂಪರ್ಕ ಕೇಂದ್ರಗಳ ಜತೆಗೆ ಹೆಚ್ಚುವರಿಯಾಗಿ 9 ಬೀಜ, ಗೊಬ್ಬರ ವಿತರಣಾ ಕೇಂದ್ರಗಳನ್ನು ಸಹ ಆರಂಭಿಸಲಾಗಿದೆ.
ಇದನ್ನೂ ಓದಿ: ಮಂಗಳೂರಿನಲ್ಲಿ ಮುಂಗಾರು ಮಳೆಯ ಸಿಂಚನ
ಬಿತ್ತನೆಗಾಗಿ ರೈತರಿಗೆ ಯಾವುದೇ ತೊಂದರೆಯಾಗದಂತೆ ಬೀಜ-ಗೊಬ್ಬರದ ವ್ಯವಸ್ಥೆ ಮಾಡಲಾಗಿದೆ ಎಂದು ಕೃಷಿ ಇಲಾಖೆಯ ಪ್ರಭಾರಿ ಜಂಟಿ ನಿರ್ದೇಶಕ ಎಲ್.ಸಿದ್ದೇಶ್ವರ ಅವರು ತಿಳಿಸಿದ್ದಾರೆ. ಉತ್ತಮ ಮಳೆಯಾಗಿದೆ. ಆದರೆ ಬಹುತೇಕ ರೈತರು ಆರ್ಥಿಕ ಸಂಕಷ್ಟ ಎದರಿಸುತ್ತಿದ್ದಾರೆ. ಕೊರೊನಾ ಭೀತಿ ಹಾಗೂ ಲಾಕ್ಡೌನ್ನಿಂದಾಗಿ ರೈತರಿಗೆ ಹಣಕಾಸಿನ ತೊಂದರೆಯಾಗಿದೆ. ಈ ಹಿಂದೆ ಯಡಿಯೂರಪ್ಪ ಅವರು ಬಿತ್ತನೆಗಾಗಿ ರೈತರಿಗೆ ಹಣಕಾಸಿನ ನೆರವು ನೀಡಿದ್ದರು. ಅದರಂತೆ ಈ ಬಾರಿ ಬಿತ್ತನೆಗಾಗಿಯೇ ರೈತರಿಗೆ ಸರ್ಕಾರ ಹಣಕಾಸಿನ ನೆರವು ನೀಡಿದ್ದರೆ ಅನುಕೂಲವಾಗುತ್ತಿತ್ತು ಎನ್ನುತ್ತಾರೆ ರೈತರು.